ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟದಿಂದ ಪಕ್ಷಾತೀತವಾಗಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಗುರುವಾರ ನೂರಾರು ರೈತರು ಪೊರಕೆ ಚಳುವಳಿ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರತಿಭಟನೆ ನಡೆಸಿದರು.
ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ, ರೈತರು ಮನಸ್ಸು ಮಾಡಿದರೆ ಈ ಪೊರಕೆ ಕಸವನ್ನು ಸ್ವಚ್ಚ ಮಾಡಿದಂತೆ ಸರಕಾರವನ್ನೇ ಗುಡಿಸಿ ಗುಂಡಾಗಾರರ ಮಾಡುವ ತಾಕತ್ತು ರೈತರಿಗಿದೆ ಎಂದು ಎಚ್ಚರಿಸಿದರು.
ಹೋರಾಟದ ಪರಿಣಾಮ ಸರಕಾರ ಗೋವಿನಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತು ನ. 21ರಂದು ನಿರ್ಧರಿಸಿ 2–3 ದಿನಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವ ಭರವಸೆಯನ್ನು ರೈತರಿಗೆ ನೀಡಿತ್ತು. ಆದರೆ ಇಲ್ಲಿಯವರೆಗೂ ಖರೀದಿ ಕೇಂದ್ರ ಪ್ರಾರಂಭಿಸುವ ನಿಟ್ಟಿನಲ್ಲಿ ಯಾವುದೇ ಕ್ರಮವಾಗದಿರುವುದು ರೈತರನ್ನು ಕೆರಳಿಸಿದ್ದು, ರೈತರು ವಿನೂತನ ರೀತಿಯಲ್ಲಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ್ರ ಗೋವಿಂದಗೌಡ್ರ ಮಾತನಾಡಿ, ಈ ಬಾರಿ ಹೆಚ್ಚಿನ ಮಳೆಯಾಗಿ ರೈತರ ಬಹುತೇಕ ಬೆಳೆಗಳು ಹಾಳಾಗಿವೆ. ಮೆಕ್ಕೆಜೋಳದ ಖರೀದಿ ಕೇಂದ್ರ ಪ್ರಾರಂಭಿಸಲು ಸರಕಾರಕ್ಕೆ ಇರುವ ತೊಂದರೆಯಾದರೂ ಏನು? ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದರೆ ಅದನ್ನಾದರೂ ಹೇಳಲಿ. ಆಶ್ವಾಸನೆ ನೀಡಿ ರೈತರನ್ನು ಹತಾಶರನ್ನಾಗಬೇಡಿ. ತಿಂಗಳುದಿನ ಹಗಲೂ-ರಾತ್ರಿ ಹೊಲದಲ್ಲಿಯೇ ಇದ್ದು, ಮೆಕ್ಕೆಜೋಳದ ರಾಶಿಯನ್ನು ಆಶಾಭಾವನೆಯಿಂದ ಕಾಯುತ್ತಿದ್ದಾರೆ. ಮಹಸೀಲು ಹಾಳಾಗುವ ಮುನ್ನವೇ ಮುಖ್ಯಮಂತ್ರಿಗಳು ಗದ್ದುಗೆ ಗುದ್ದಾಟದಿಂದ ಹೊರಬಂದು ರೈತರ ಕಡೆ ಗಮನ ಹರಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಬೆಂಡಿಗೇರಿ, ಪೂರ್ಣಾಜಿ ಖರಾಟೆ, ರವಿಕಾಂತ ಅಂಗಡಿ, ಮಂಜುನಾಥ ಮಾಗಡಿ, ಮಹೇಶ ಹೊಗೆಸೊಪ್ಪಿನ, ನಾಗರಾಜ ಚಿಂಚಲಿ, ನೀಲಪ್ಪ ಶರಸೂರಿ ಮುಂತಾದವರಿದ್ದರು.
ಆದ್ರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ಮಾತನಾಡಿ, ಖರೀದಿ ಕೇಂದ್ರ ಪ್ರಾರಂಭಿಸುವುದಾಗಿ ಸರಕಾರ ಭರವಸೆ ನೀಡಿ ಒಂದು ವಾರವಾಗಿದೆ. ಶನಿವಾರ ಬೆಳಿಗ್ಗೆ 10 ಗಂಟೆಯೊಳಗೆ ಖರೀದಿ ಕೇಂದ್ರ ಆರಂಭವಾಗದಿದ್ದಲ್ಲಿ ಮತ್ತೆ ಆಮರಣಾಂತ ಉಪವಾಸ ಪ್ರಾರಂಭಿಸುತ್ತೇವೆ. ಯಾವುದೇ ವೈದ್ಯಕೀಯ ತಪಾಸಣೆ/ಚಿಕಿತ್ಸೆ ಪಡೆಯುವುದಿಲ್ಲ. ರೈತರ ಬೇಡಿಕೆ ಈಡೇರದಿದ್ದಲ್ಲಿ ವೇದಿಕೆಯಲ್ಲಿಯೇ ಪ್ರಾಣ ಬಿಡಲು ಸಿದ್ಧ ಎಂದು ಎಚ್ಚರಿಕೆ ನೀಡಿದರು.



