ವಿಜಯಸಾಕ್ಷಿ ಸುದ್ದಿ, ಗದಗ: ಗದಗದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಭವ್ಯವಾಗಿ ಜರುಗಿತು. ಡಿ.ಎ.ಆರ್, ಗದಗ ನಗರ ಹಾಗೂ ವಿ.ಘಟಕ, ಬೆಟಗೇರಿ ವೃತ್ತ, ಗದಗ ಗ್ರಾಮೀಣ, ಮುಳಗುಂದ, ರೋಣ, ನರಗುಂದ, ಮುಂಡರಗಿ ಮತ್ತು ಶಿರಹಟ್ಟಿ ಘಟಕಗಳ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಜಿಲ್ಲ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಚಾಲನೆ ನೀಡಿದರು. 2024ರ ವಯಕ್ತಿಕ ಚಾಂಪಿಯನ್ ಅನಿಲ ಬನ್ನಿಕೋಪ್ಪ ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, “ಮನಸ್ಸಿನ ನೆಮ್ಮದಿ ಮತ್ತು ಪರಸ್ಪರ ಅರ್ಥೈಸಿಕೊಳ್ಳುವಿಕೆಗಾಗಿ ಕ್ರೀಡೆಗಳು ಅತ್ಯಂತ ಮುಖ್ಯ. ಗೆಲುವು–ಸೋಲು ಸಹಜ. ಆದರೆ ಅದರಾಚೆಗೆ ಎಲ್ಲರೂ ಖುಷಿಯಿಂದ, ಮುಕ್ತ ಮನಸ್ಸಿನಿಂದ ಭಾಗವಹಿಸಬೇಕು” ಎಂದು ಹೇಳಿದರು.
ಪೊಲೀಸ್ ಸಿಬ್ಬಂದಿಗಳ ಒತ್ತಡದ ಕೆಲಸದ ನಡುವೆಯೂ ಆರೋಗ್ಯ ಕಾಪಾಡಲು ಈ ಕ್ರೀಡಾಕೂಟವನ್ನು ಆಯೋಜಿಸಿದ್ದೇವೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದರು. “ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿ, ಜಿಲ್ಲೆಯ ಕೀರ್ತಿ ಹೆಚ್ಚಲಿ ಎಂಬುದು ಆಶಯ” ಎಂದರು.
ಕಾರ್ಯಕ್ರಮಕ್ಕೆ ಪ್ರಭುಗೌಡ, ಮುರ್ತುಜಾ ಖಾದ್ರಿ, ಮಾಂತೇಶ ಸಜ್ಜನ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.



