ರಾಮನಗರ: ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಲಕ್ಷ್ಮಣ್ (51) ಮೃತ ಪೊಲೀಸ್ ಪೇದೆಯಾಗಿದ್ದು,
Advertisement
ಸೋಮವಾರ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಲಕ್ಷ್ಮಣ್ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಸಹೋದ್ಯೋಗಿಗಳಲ್ಲಿ ಅನುಮಾನಗಳು ಹುಟ್ಟಿದ್ದುವು. ಇಂದು ಬೆಳಗ್ಗೆ ಕೆರೆಯಲ್ಲಿ ಅವರು ಹೆಲ್ಮೆಟ್ ಸಮೇತ ಬಿದ್ದಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೆರೆ ಪಕ್ಕದಲ್ಲೇ ಅವರ ಬೈಕ್ ಸಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದು, ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಕಾಲು ಜಾರಿದ ಪರಿಣಾಮ ಸಂಭವಿಸಿದ ಘಟನೆಯೋ ಎನ್ನುವುದನ್ನು ತಿಳಿದುಕೊಳ್ಳಲು ತನಿಖೆ ಮುಂದುವರೆದಿದೆ. ಪತ್ತೆಯಾದ ಶವವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.


