ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ & ಪ್ರಸಾರ ಇಲಾಖೆ, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗದಗ ಇವರ ಸಹಯೋಗದೊಂದಿಗೆ ನಗರದ ಗಾಂಧಿ ವೃತ್ತದಲ್ಲಿ ವಿಶ್ವ ಏಡ್ಸ್ ದಿನದ ನಿಮಿತ್ತ ಕ್ಯಾಂಡಲ್ ದಿನ ಮತ್ತು ಮೌನಾಚರಣೆ ಕಾರ್ಯಕ್ರಮ ಜರುಗಿತು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಚ್.ಐ.ವಿ ಸೋಂಕಿನಿಂದ ಮರಣಿಸಿದವರ ಸಂತಾಪ ಸೂಚಕವಾಗಿ ಶೋಕ ವ್ಯಕ್ತಪಡಿಸಲು ಹಾಗೂ ಅವರಿಗೆ ಚಿರಶಾಂತಿ ಕೋರಲು ಕ್ಯಾಂಡಲ್ ದಿನವನ್ನು ಹಮ್ಮಿಕೊಂಡಿದ್ದು, ಸೋಂಕಿತರು ಎದೆಗುಂದದೆ ಮಾನಸಿಕ ಸ್ಥೈರ್ಯ ಮತ್ತು ಸದೃಢತೆಯಿಂದ ಜೀವನ ಸಾಗಿಸಲು ಸಂಘ-ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಿ ಶ್ರಮಿಸಲು ತಿಳಿಸಿದರು.
ಮಾಜಿ ನಗರಸಭಾ ಸದಸ್ಯ ಸತೀಶ ಪರ್ವತಗೌಡರ, ಎ.ಆರ್.ಟಿ. ಕೇಂದ್ರದ ಸಿಬ್ಬಂದಿ, ಐ.ಸಿ.ಟಿ.ಸಿ ಸಿಬ್ಬಂದಿ, ಡ್ಯಾಪ್ಕೂಟ್ ಸಿಬ್ಬಂದಿ, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟದ ಹಜರತಬಿ ಹಾಗೂ ಸದಸ್ಯರು, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸುನೀಲ ಹಾಗೂ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಎನ್.ಜಿ.ಓ. ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸುಮಿತ್ರಾ ಮಾವಿನಕಾಯಿ ಪ್ರಾರ್ಥಿಸಿದರು. ಬಸವರಾಜ ಲಾಳಗಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಬಡಿಗೇರ ವಂದಿಸಿದರು.



