ವಿಜಯಸಾಕ್ಷಿ ಸುದ್ದಿ, ಗದಗ: ಭಕ್ತರು ಅಗ್ನಿಕುಂಡವನ್ನು ಪ್ರವೇಶಿಸಿ, ಪುರವಂತರ ಸೂತ್ರವನ್ನು ಹಾಕಿಸಿಕೊಂಡು ತಮ್ಮ ಸ್ವಾಮಿ ನಿಷ್ಠೆ, ಶೃದ್ಧಾಭಕ್ತಿಯನ್ನು ಅಭಿವ್ಯಕ್ತಗೊಳಿಸುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಪ್ರದರ್ಶಿಸಿದ ಸನ್ನಿವೇಶ ಶುಕ್ರವಾರ ಬೆಟಗೇರಿಯ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಕಂಡುಬಂದಿತು.
ಬೆಟಗೇರಿಯ ಟೆಂಗಿನಕಾಯಿ ಬಜಾರದ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಪರ್ವತಮಲ್ಲೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ಮಾಲಿಕೆಯನ್ವಯ ದೇವಸ್ಥಾನದ ಬಳಿ ನಿರ್ಮಿಸಿದ್ದ ಅಗ್ನಿಕುಂಡವನ್ನು ವೀರಭದ್ರ ದೇವರ ನಾಮಸ್ಮರಣೆ, ಜಯಘೋಷಗಳೊಂದಿಗೆ ಭಕ್ತರು ಅಗ್ನಿಯಲ್ಲಿ ನಡೆಯುತ್ತ, ಓಡುತ್ತ ಆಚೆ ಬಂದರು.
ಮಡಿವಂತಿಕೆಯೊಂದಿಗೆ ಹೊಸಬಟ್ಟೆ ಧರಿಸಿ ಬಂದ ಭಕ್ತರಿಗೆ ವೀರಭದ್ರ ದೇವರ ಪುರವಂತರು ಅಪೇಕ್ಷಿತ ಭಕ್ತರ ನಾಲಿಗೆ, ಕೆನ್ನೆ, ಕೈ ಭಾಗ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಶಸ್ತ್ರಗಳನ್ನು ಚುಚ್ಚಿಸಿಕೊಳ್ಳುವ, ಅಗ್ನಿಕುಂಡದಲ್ಲಿ ಹಾಯ್ದು ಭಕ್ತಿಯನ್ನು ಮೆರೆಯುವ ದೃಶ್ಯ ಕಂಡು ಬಂತು.
ಭಕ್ತರು ಉದ್ಯೋಗ, ಸಂತಾನ, ಆರೋಗ್ಯ, ಸಂಪತ್ತು ಮುಂತಾದ ಬೇಡಿಕೆಯುಳ್ಳ ಸಂಕಲ್ಪಗಳ ಸಾಕಾರಕ್ಕಾಗಿ ಪರಾಕಾಷ್ಠೆಗೆ ಒಳಗಾಗುವ ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮ ಹಿಂದಿನಿಂದಲೂ ನಡೆಯುತ್ತ ಬಂದಿದ್ದು, ಭಕ್ತರು ಈಗಲೂ ಪಾಲಿಸಿಕೊಂಡು ಬಂದಿದ್ದಾರೆ.
ಪುರವಂತರ, ಸಮ್ಮಾಳ ಮೇಳದ ಸಮೇತ ವೀರಭದ್ರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಜಯಘೋಷಗಳೊಂದಿಗೆ ಅಗ್ನಿಕುಂಡ ಪ್ರವೇಶಿಸಿ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಅಭಿವ್ಯಕ್ತಗೊಳಿಸಿದ್ದು ನೆರೆದಿದ್ದ ಭಕ್ತ ವೃಂದವನ್ನು ಮೂಕವಿಸ್ಮಿತರನ್ನಾಗಿಸಿತು.
ಸಾಮೂಹಿಕ ವಿವಾಹ: ಜಾತ್ರಾ ಮಹೋತ್ಸವದ ಅಂಗವಾಗಿ ಡಿ. 6ರಂದು ಮುಂಜಾನೆ 11 ಗಂಟೆಗೆ ಉಚಿತ ಸಾಮೂಹಿಕ ವಿವಾಹ ಹಾಗೂ ಮಹಾ ಅನ್ನಸಂತರ್ಪಣೆ ಜರುಗುವುದು. ಸಾನ್ನಿಧ್ಯವನ್ನು ಬೆಟಗೇರಿಯ ಸದ್ಗುರು ಮುಕ್ಕಣ್ಣೇಶ್ವರ ಮಠದ ಪೂಜ್ಯ ಶಂಕರಾನಂದ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಕುಮಾರಸ್ವಾಮಿ ರಾಮಯ್ಯಸ್ವಾಮಿ ದೇವಾಂಗಮಠ ವಹಿಸುವರು. ಮುಖ್ಯ ಅತಿಥಿಗಳಾಗಿ ಬಸವರಾಜ ಡಾಕಪ್ಪ ಪುರವಂತರ ದಂಪತಿಗಳು ಹಾಗೂ ಅಣ್ಣಪ್ಪ ಕೊಟ್ರೇಶಪ್ಪ ಕೊಪ್ಪದ ದಂಪತಿಗಳು ಆಗಮಿಸುವರು. ಭಕ್ತಾಧಿಗಳು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಕಮೀటీದು ಪ್ರಕಟಣೆಯಲ್ಲಿ ವಿನಂತಿಸಿದೆ.



