HomeGadag Newsಪಟ್ಟಣಕ್ಕೆ ಒದಗಿಬಂದ ಸ್ವಚ್ಛತೆಯ ಭಾಗ್ಯ!

ಪಟ್ಟಣಕ್ಕೆ ಒದಗಿಬಂದ ಸ್ವಚ್ಛತೆಯ ಭಾಗ್ಯ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಹುದಿನಗಳ ನಂತರ ಮತ್ತೆ ಲಕ್ಷ್ಮೇಶ್ವರ ಪಟ್ಟಣಕ್ಕೆ ನಾಡದೊರೆ, ಸಿ.ಎಂ ಸಿದ್ದರಾಮಯ್ಯ ಇದೇ ಡಿ. 13ರಂದು ಆಗಮಿಸುತ್ತಿರುವ ಹಿನ್ನೆಲೆ­ಯಲ್ಲಿ ಮುಖ್ಯಮಂತ್ರಿಗಳ ಸ್ವಾಗತಕ್ಕೆ ಪಟ್ಟಣ ತರಾತುರಿಯಲ್ಲಿ ಸಿದ್ಧವಾಗುತ್ತಿದ್ದು, ಅಧಿಕಾರಿಗಳು ಎಡೆಬಿಡದೆ ಕಾರ್ಯಪ್ರವೃತ್ತರಾಗಿದ್ದಾರೆ.

ಡಿ. 13ರಂದು ಸಿ.ಎಂ ಸಿದ್ದರಾಮಯ್ಯ ಅವರು ಪಟ್ಟಣದ ಸ್ಕೂಲ್ ಚಂದನದಲ್ಲಿ ಪ್ರೊ. ಸಿ.ಎನ್.ಆರ್. ರಾವ್ ಅವರು ಪ್ರಾರಂಭಿಸಿದ ವಿಜ್ಞಾನ ವಿಸ್ತೃತ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿ ಪುರಸಭೆಯಿಂದ ರಸ್ತೆಯ ಅಕ್ಕ-ಪಕ್ಕದಲ್ಲಿ ಬೆಳೆದ ಕಸ-ಕಡ್ಡಿ ತೆರವುಗೊಳಿಸಿ ಚರಂಡಿ ಸ್ವಚ್ಛತೆ ಮಾಡುತ್ತಿದ್ದರೆ, ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆಯ ತಗ್ಗು-ಗುಂಡಿಗಳಿಗೆ ತಾತ್ಕಾಲಿಕ ದುರಸ್ತಿ ಕಾರ್ಯ ಹಾಗೂ ಪ್ರವಾಸಿ ಮಂದಿರಕ್ಕೆ ಬಣ್ಣ ಬಳಿಯುವ ಕಾರ್ಯ ಮಾಡುತ್ತಿದ್ದು, ಎಲ್ಲ ಕಾರ್ಯಗಳು ಬಿರುಸಿನಿಂದ ಸಾಗಿವೆ.

ಪಟ್ಟಣದ ಪ್ರವಾಸಿ ಮಂದಿರದ ಹೊಸ ಕಟ್ಟಡ ನಿರ್ಮಾಣವಾದ ನಂತರ ಸುಣ್ಣ ಬಣ್ಣ ಕಂಡಿರಲಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆ­ಯಲ್ಲಿ ಎಚ್ಚೆತ್ತುಕೊಂಡ ಇಲಾಖೆಯ ಅಧಿಕಾರಿಗಳು ಈಗ ಪ್ರವಾಸಿ ಮಂದಿರವನ್ನು ಸುಣ್ಣ-ಬಣ್ಣ ಹಚ್ಚಿ ಸಿಂಗರಿಸುತ್ತಿದ್ದಾರೆ. ಪ್ರವಾಸಿ ಮಂದಿರದ ಆವರಣದಲ್ಲಿ ಬೆಳೆದ ಕಸ-ಕಡ್ಡಿ ಸ್ವಚ್ಛವಾಗುತ್ತಿದೆ. ಅದರಂತೆ ಲೋಕೋಪಯೋಗಿ ಇಲಾಖೆಯವರು ಪ್ರವಾಸಿ ಮಂದಿರದ ಸ್ವಚ್ಛತೆಯ ಜೊತೆಗೆ ತಗ್ಗು-ಗುಂಡಿಗಳಿಂದ ತುಂಬಿಕೊಡಿದ್ದ ಲಕ್ಷ್ಮೇಶ್ವರ-ದೊಡ್ಡೂರು ರಸ್ತೆಯೂ ದುರಸ್ತಿ ಭಾಗ್ಯ ಪಡೆದುಕೊಂಡಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿಯೂ ಸಹ ಅಲ್ಲಲ್ಲಿ ಬಿದ್ದಿರುವ ತಗ್ಗು-ಗುಂಡಿಗಳಿಗೆ ತಾತ್ಕಾಲಿಕ ಪರಿಹಾರ ದೊರೆಯುತ್ತಿರುವದನ್ನು ಕಾಣಬಹುದು. ಹಲವಾರು ವರ್ಷಗಳಿಂದ ಹಾಗೆಯೇ ಬಿದ್ದಿರುವ ತಗ್ಗು-ಗುಂಡಿಗಳಿಗೆ ಮುಖ್ಯಮಂತ್ರಿಗಳ ಆಗಮನವೇ ಭಾಗ್ಯವಾಗಿ ಪರಿಣಮಿಸಿದೆ.

ಪುರಸಭೆಯ ಪೌರಕಾರ್ಮಿಕರು ಉಮಾವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ನ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಿದ್ದು, ಕಸ-ಕಡ್ಡಿಗಳು, ಗಿಡ-ಗಂಟಿಗಳನ್ನು ತೆಗೆದು ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ.

ಈ ತರಾತುರಿಯ ಕಾರ್ಯಕ್ಕೆ ಜನರು ಒಂದು ರೀತಿಯಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದು, ಬಹುವರ್ಷಗಳಿಂದಲೂ ನಡೆಯದೇ ಇರುವ ಕೆಲಸ-ಕಾರ್ಯಗಳು ಮುಖ್ಯಮಂತ್ರಿಗಳ ಆಗಮಿಸುತ್ತಿರುವ ನೆಪಕ್ಕಾದರೂ ನಡೆಯುತ್ತಿವೆ. ಮುಖ್ಯಮಂತ್ರಿಗಳು ಮೂರು ತಿಂಗಳಿಗೆ ಒಮ್ಮೆಯಾದರೂ ಈ ಭಾಗಕ್ಕೆ ಬೇಟಿ ನೀಡುವಂತಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!