ವಿಜಯಸಾಕ್ಷಿ ಸುದ್ದಿ, ನರೇಗಲ್: ಸಹಪಠ್ಯ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕ. ಹೀಗಾಗಿ ಮಕ್ಕಳು ಪಠ್ಯ ಚಟುವಟಿಕೆಗಳಷ್ಟೇ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಆಸಕ್ತಿಯಿಂದ ಭಾಗವಹಿಸಬೇಕು, ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವೇ ಹೊರತು ಜಯವಲ್ಲ ಎಂದು ಡಯಟ್‌ನ ನಿವೃತ್ತ ಉಪನ್ಯಾಸಕ ಕೆ.ಪಿ. ಸಾಲಿಮಠ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಶಿವಾನುಭವ ಮಂಟಪದಲ್ಲಿ ಬುಧವಾರ ಜರುಗಿದ ಕ್ಲಸ್ಟರ್ ಮಟ್ಟದ ಪ್ರಾಥಮಿಕ/ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ/ಕಲೋತ್ಸವದಲ್ಲಿ ಅವರು ಮಾತನಾಡಿದರು.
ನಿರ್ಣಾಯಕರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಪೂಜ್ಯರು ತಪೋಗೈದ ಸ್ಥಳದಲ್ಲಿ ನನ್ನನ್ನು ಸನ್ಮಾನಿಸಿದ್ದು ತುಂಬಾ ಸಂತೋಷವಾಗಿದೆ. ಈ ವಿದ್ಯಾಸಂಸ್ಥೆಯಲ್ಲಿ ನಮ್ಮ ಮಕ್ಕಳ ಅಭ್ಯಾಸ ಮಾಡಿಸುವುದಕ್ಕಾಗಿಯೇ ನಾನು ಈ ಊರಿನಲ್ಲಿ ನೆಲೆಸಿದ್ದೇನೆಂದು ನುಡಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯ ನಿಂಗನಗೌಡ ಲಕ್ಕನಗೌಡ್ರ ಹಾಗೂ ಸ್ಪರ್ಧಾಳುಗಳಿಂದ ಪ್ರತಿಭಾ ಕಾರಂಜಿ/ಕಲೋತ್ಸವದ ಉದ್ಘಾಟನೆ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ.ಬಿ.ಎಮ್ ಉಚಿತ ಪ್ರಸಾದ ನಿಲಯದ ಚೇರ್ಮನ್ ಮಲ್ಲಿಕಾರ್ಜುನಪ್ಪ ಮೆಣಸಗಿ ವಹಿಸಿದ್ದರು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಸ್ವಾಗತಿಸಿದರು. ಶಿಕ್ಷಕ ಎ.ಟಿ. ಮಳ್ಳಳ್ಳಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶಿಕ್ಷಕರಾದ ಕುಮಾರ ಹರ್ಲಾಪೂರ ಮತ್ತು ಎಸ್.ಶಿವಮೂರ್ತಿ ನಿರೂಪಿಸಿದರು. ಶ್ರೀ ಬಸವೇಶ್ವರ ಸಿ.ಬಿ.ಎಸ್.ಇ ಪ್ರಾಚಾರ್ಯ ಬಿ.ಎಚ್. ಬಂಡಿಹಾಳ ವಂದಿಸಿದರು. ಕಾರ್ಯಕ್ರಮದಲ್ಲಿ ಜ್ಯೋತಿ ಬೇಲೇರಿ, ಮುಖ್ಯ ಶಿಕ್ಷಕ ಎಮ್.ಬಿ. ಸಜ್ಜನ ಸೇರಿದಂತೆ ಎಲ್ಲ ಸಿಬ್ಬಂದಿಗಳು, ನರೇಗಲ್ ಕ್ಲಸ್ಟರ್‌ನ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ವ ಶಿಕ್ಷಣ ಅಭಿಯಾನ ಸಮೂಹ ಸಂಪನ್ಮೂಲ ಕೇಂದ್ರ ನರೇಗಲ್ ಹಾಗೂ ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆ ಮತ್ತು ಶ್ರೀ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆ ನರೇಗಲ್ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.



