ವಿಜಯಸಾಕ್ಷಿ ಸುದ್ದಿ, ಗದಗ: ಜಲಸಂಚಾಯಿ ಜನಭಾಗಿದಾರಿ-1.0 ಕಾರ್ಯಕ್ರಮದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗದಗ ಜಿಲ್ಲೆಗೆ ಮನ್ನಣೆ ಸಿಗುವಂತೆ ಮಾಡಿದ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಗದಗ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ ಪ್ರಗತಿ ಪರಿಶೀಲನೆ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಲಶಕ್ತಿ ಅಭಿಯಾನದ ಮಹತ್ವದ ಭಾಗವಾಗಿರುವ ‘ಜಲಸಂಚಾಯಿ ಜನಭಾಗಿದಾರಿ-1.0’ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯು ಮಹತ್ವದ ಸಾಧನೆ ಮಾಡುವ ಮೂಲಕ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ರಾಷ್ಟ್ರ ಮಟ್ಟದಲ್ಲಿ 4ನೇ ಸ್ಥಾನ ಪಡೆಯುವ ಮೂಲಕ 25 ಲಕ್ಷ ರೂಪಾಯಿಗಳ ನಗದು ಬಹುಮಾನ ಪಡೆದಿದೆ. ಇದರ ಎಲ್ಲ ಶ್ರೇಯಸ್ಸು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದರು.
ಜಿ.ಪA ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಜನ ಭಾಗಿದಾರಿ ಪ್ರಶಸ್ತಿಗೆ ಆಯ್ಕೆ ಮಾಡುವ ಮುನ್ನ ಕೇಂದ್ರ ನೋಡಲ್ ಅಧಿಕಾರಿಗಳು 2025ರ ಜೂನ್ 16ರಿಂದ 21ರವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ನಡೆಸಿ, ಕಾಮಗಾರಿಗಳು ಉನ್ನತ ಮಾನದಂಡಗಳನ್ನು ಪೂರೈಸಿರುವುದು ಖಚಿತಪಡಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. 465 ಮಳೆ ನೀರು ಕೊಯ್ಲು, 75 ಬೋರ್‌ವೆಲ್ ರಿಚಾರ್ಜ್, 10 ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗಿದೆ. ಗದಗ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಶ್ರಮ, ಎಲ್ಲ ಹಂತದ ಸಿಬ್ಬಂದಿಗಳ ಮಹತ್ತರ ಕಾರ್ಯ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಲಭಿಸುವಂತೆ ಮಾಡಿದೆ ಎಂದರು.
ಪ್ರಶಸ್ತಿ ದೊರಕುವಲ್ಲಿ ಶ್ರಮ ವಹಿಸಿದ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ಕಿರಣಕುಮಾರ ಎಸ್.ಎಚ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಲ್ಲಯ್ಯ ಕೊರವನವರ (ಗದಗ), ಶ್ಯಾಮ್ ಸುಂದರ ಇನಾಮದಾರ್ (ನರಗುಂದ), ಕೃಷ್ಣಪ್ಪ ಧರ್ಮರ (ಲಕ್ಷ್ಮೇಶ್ವರ), ವಿಶ್ವನಾಥ ಹೊಸಮನಿ (ಮುಂಡರಗಿ), ಚಂದ್ರಶೇಖರ ಬಿ.ಕಂದಕೂರ (ರೋಣ/ ಗಜೇಂದ್ರಗಡ) ಸಹಾಯಕ ನಿರ್ದೇಶಕರು (ಉಖಾ) ಕುಮಾರ ಪೂಜಾರ (ಗದಗ), ಸಂತೋಷ ಪಾಟೀಲ (ನರಗುಂದ), ಬಸವರಾಜ ಬಡಿಗೇರ (ಗಜೇಂದ್ರಗಡ), ಸುರೇಶ ಲಮಾಣಿ (ಪಂ.ರಾ ಶಿರಹಟ್ಟಿ), ಇ-ಕೆವೈಸಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ ಸುರಕೋಡ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶೃತಿ ಸಂಗಳದ, ಎಚ್.ಎಸ್. ಚಟ್ರಿ ಇತರರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಯೋಜನಾಧಿಕಾರಿಗಳಾದ ಎಂ.ವಿ. ಚಳಗೇರಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಇತರರು ಇದ್ದರು.
2024ರ ಏಪ್ರಿಲ್ 1ರಿಂದ 2025 ಮಾರ್ಚ್ 31ರ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಹಾಗೂ ಇತರೆ ಯೋಜನೆಗಳಡಿ ಜಿಲ್ಲೆಯ ಗ್ರಾಮೀಣ ಜನರ ಸಹಭಾಗಿತ್ವದಲ್ಲಿ ಮಳೆ ನೀರಿನ ಸಂರಕ್ಷಣೆಗೆ 11,971 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಬೃಹತ್ ಜಲ ಸಂರಕ್ಷಣೆ ಕಾರ್ಯ ರಾಷ್ಟ್ರದ ಗಮನ ಸೆಳೆದಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದರು.



