ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಡಿಜಿಎಮ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ 21ನೇ ವರ್ಷದ ಸ್ನೇಹ ಸಿಂಚನ ಸಮಾವೇಶವನ್ನು ಶಿವಾನಂದ ಕಲ್ಯಾಣ ಮಂಟಪದಲ್ಲಿ ಡಿ. 14ರಂದು ಏರ್ಪಡಿಸಲಾಗಿದೆ ಎಂದು ಡಾ. ಎಸ್.ಎನ್. ಬೆಳವಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಎಮ್ ಆಯುರ್ವೇದ ಮಹಾವಿದ್ಯಾಲಯ ನಾಲ್ಕು ದಶಕದಿಂದ ಸಾವಿರಾರು ವೈದ್ಯರನ್ನು ಸಮಾಜಕ್ಕೆ ಅರ್ಪಿಸಿದೆ. ದೇಶ-ವಿದೇಶದಲ್ಲೂ ಡಿಜಿಎಮ್ ಮಹಾವಿದ್ಯಾಲಯದಲ್ಲಿ ಕಲಿತವರು ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರನ್ನುೊಂದೆಡೆ ಸೇರಿಸುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಬಾರಿಯ ಸಮಾವೇಶಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ಜಾನಪದ ಕಲಾವಿದ ಗುರುರಾಜ ಹೊಸಕೋಟೆ, ಶಬ್ಬಿರ ಡಾಂಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಜಾನಪದ ಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ರಂಗು ತುಂಬಲಿದ್ದಾರೆ. ಪಾಂಡಿಚೇರಿಯ ರಾಜೀವ ಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕುಬೇರ ಸಂಕ ಮತ್ತು ಗದಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜೈಪಾಲ ಸಿಂಗ್ ಸಮೋರೇಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್. ಪಾಟೀಲ ಹಾಗೂ ಅಲುಮ್ನಿ ಅಸೋಷಿಯೇಷನ್ನ ಸಂಸ್ಥಾಪಕ ಗೌರವಾಧ್ಯಕ್ಷ ಡಾ. ಜಿ.ಬಿ. ಪಾಟೀಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎನ್. ಬೆಳವಡಿ ಅಧ್ಯಕ್ಷತೆ ವಹಿಸಲಿದ್ದು, ಡಾ. ಐ.ಎಸ್. ಸರ್ವಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಪೂರ್ಣ ಪ್ರಾಯೋಜಕತ್ವ ಮತ್ತು ವಿಶೇಷ ಕಾರ್ಯಕ್ರಮಗಳನ್ನು ಬಿ.ಎ.ಎಂ.ಎಸ್ 2000ನೇ ಬ್ಯಾಚಿನ ವಿದ್ಯಾರ್ಥಿಗಳು ವಹಿಸಿಕೊಂಡಿದ್ದಾರೆ. ಸಮಾವೇಶವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ವರ್ಷವಿಡೀ ಅನೇಕ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಡಿಜಿಎಮ್ ಅಲುಮ್ನಿ ಟಾಕ್ಸ್ ಎಂಬ ನೂತನ ಕಾರ್ಯಕ್ರಮವನ್ನು ಪರಿಚಯಿಸಿದ್ದು, ಉಚಿತ ಬೃಹತ್ ಆರೋಗ್ಯ ಶಿಬಿರ ಮತ್ತು ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಸಹ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಾ. ಚಂದ್ರಕಾಂತ ಇಟಗಿ, ಡಾ. ಯು.ವಿ. ಪುರದ, ಡಾ. ಐ.ಬಿ. ಕೊಟ್ಟೂರಶೆಟ್ಟರ, ಡಾ. ಕುಮಾರ, ಡಾ. ವೀಣಾ ಕೋರಿ, ಡಾ. ಎಮ್.ವಿ. ಸೊಬಗಿನ, ಡಾ. ಬೂದೇಶ ಕಣಾಜ ಇದ್ದರು.
ಸಮಾವೇಶದಲ್ಲಿ ಹಳೆಯ ವಿದ್ಯಾರ್ಥಿಗಳಿಗೆ ಗುರುವಂದನಾ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಹಾಗೂ ಮಹಾವಿದ್ಯಾಲಯದ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದುದ್ದಗಲಕ್ಕೂ ಇರುವ ಸಾವಿರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಡಾ. ಎಸ್.ಎನ್. ಬೆಳವಡಿ ತಿಳಿಸಿದರು.



