ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ರಾಜು ಖಾನಪ್ಪನವರ, ಸಂತೋಷ ಕುರಿ ಮತ್ತು ಫಕ್ಕೀರೇಶ ರಟ್ಟಿಹಳ್ಳಿ ವಿರುದ್ಧ ದೌರ್ಜನ್ಯ, ದರ್ಪ ಹಾಗೂ ಜೀವ ಬೆದರಿಕೆ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಚನ್ನಪಟ್ಟಣ ಗ್ರಾಮದ ನಾಮದೇವ ಯಲ್ಲಪ್ಪ ಮಾಂಡ್ರೆ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಡಿ.7ರಂದು ಯಲ್ಲಪ್ಪ ಮಾಂಡ್ರೆ ಎಂಬುವರು ತಮ್ಮ ಖಾಸಗಿ ಕೆಲಸದ ನಿಮಿತ್ತ ಶಿರಹಟ್ಟಿಯ ನಿರೀಕ್ಷಣಾ ಮಂದಿರಕ್ಕೆ ತೆರಳಿದ ಸಂದರ್ಭದಲ್ಲಿ ಸಂಜೆ 7.27ರ ಸುಮಾರಿಗೆ ಮೊಬೈಲ್ ಮೂಲಕ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ, ನಿನ್ನ ಮೇಲೆ ಜಾತಿ ನಿಂದನೆ ಎಫ್‌ಐಆರ್ ಹಾಕಿ ಸ್ಟೇಶನ್ನಿಗೆ ಕರೆಸ್ತೀನಿ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಸಣ್ಣ ವಿಚಾರ ದೊಡ್ಡದು ಮಾಡಬ್ಯಾಡ್ರಿ, ನಾನೇನಾದರೂ ತಪ್ಪು ಮಾತನಾಡಿದರೆ ಕ್ಷಮಿಸಿ ಅಂತಾ ಅಂಗಲಾಚಿ ಬೇಡಿಕೊಂಡೆ, ನಾನು ನಿಮ್ಮ ಪಕ್ಷದ ಕಾರ್ಯಕರ್ತ ಎಂದರೂ ಕೇಳಲಿಲ್ಲ. ಪುನಃ ಅವಾಚ್ಯ ಶಬ್ದಗಳಿಂದ ಬೈದು, ಪದೇ ಪದೇ ಕರೆ ಮಾಡಿ ಚನ್ನಪಟ್ಟಣಕ್ಕೆ ಬಂದು ಎತ್ತಿಕೊಂಡು ಬರುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ನಾಮದೇವ ಯಲ್ಲಪ್ಪ ಮಾಂಡ್ರೆ ಉಲ್ಲೇಖಿಸಿದ್ದಾರೆ.
ಪ್ರಕರಣವು ಎನ್‌ಸಿ ಸ್ವರೂಪದ್ದಾಗಿರುವುದರಿಂದ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಲಕ್ಷ್ಮೇಶ್ವರದ ಅನುಮತಿಯೊಂದಿಗೆ ಪ್ರಕರಣ ದಾಖಲಿಸಿ ಶಿರಹಟ್ಟಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪಕ್ಷದ ಕಾರ್ಯಕರ್ತನಾದ ನನಗೇ ಹೀಗಾಗಿದ್ದು, ಇನ್ನು ಜನಸಾಮಾನ್ಯರಿಗೆ ಹೇಗಾಗಬಾರದು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇಂತಹ ಶಾಸಕರು ಕೂಡಲೇ ರಾಜೀನಾಮೆ ಕೊಡಬೇಕು, ಅವರ ಬೆಂಬಲಿಗರು ಒತ್ತಡ ಹಾಕಿ, ನಮ್ಮ ಮಾತು ಕೇಳದಿದ್ದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದು, ನನ್ನ ಜೊತೆ ಮಾತನಾಡಿದ ಆಡಿಯೋ ರೆಕಾರ್ಡಿಂಗ್ ನನ್ನ ಬಳಿ ಇದೆ. ನನಗೆ ಅಥವಾ ನನ್ನ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ ನೇರವಾಗಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರ ಬೆಂಬಲಿಗರೇ ಕಾರಣ. ನನ್ನ ಜೀವ ರಕ್ಷಣೆ ಕುರಿತು ಭದ್ರತೆ ಒದಗಿಸಬೇಕೆಂದು ಎಫ್‌ಐಆರ್‌ನಲ್ಲಿ ನಾಮದೇವ ಯಲ್ಲಪ್ಪ ಮಾಂಡ್ರೆ ಉಲ್ಲೇಖಿಸಿದ್ದಾರೆ.



