ವಿಜಯಸಾಕ್ಷಿ ಸುದ್ದಿ, ಡಂಬಳ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಸಸ್ಯಕಾಶಿ ಕಪ್ಪತ್ತಗುಡ್ಡ ಕೆಲ ಕಿಡಿಗೇಡಿಗಳಿಂದಾಗಿ ಹರಡುವ ಬೆಂಕಿಯ ಕೆನ್ನಾಲಿಗೆಗೆ ಪಕ್ಷಿಗಳು, ಸರೀಸೃಪಗಳ ಸಾವು, ಅಪಾರ ಸಂಪತ್ತು ಹಾಳಾಗಬಾರದು ಎನ್ನುವ ಹಿನ್ನೆಲೆಯಲ್ಲಿ ಕಪ್ಪತಗುಡ್ಡದಂಚಿನ ಗ್ರಾಮಗಳ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ `ನಮ್ಮ ಕಪ್ಪತಗುಡ್ಡ ಕಪ್’ ವಾಲಿಬಾಲ್ ಪಂದ್ಯಾವಳಿಯನ್ನು ಡಿ. 21, 25, 30ರಂದು ಆಯೋಜಿಸಿದೆ.
ಮುಂಡರಗಿ ಹಾಗೂ ಡಂಬಳ ಹೋಬಳಿ ವ್ಯಾಪ್ತಿಯ ಕಪ್ಪತಗುಡ್ಡದಂಚಿನಲ್ಲಿ ಬರುವ 31 ಗ್ರಾಮಗಳ ಯುವಕರಿಗೆ ಹಾಗೂ ಗ್ರಾಮಸ್ಥರಿಗೆ ಕಪ್ಪತಗುಡ್ಡ ವನ್ಯಜೀವಿಧಾಮವನ್ನು ಬೆಂಕಿಯಿಂದ ರಕ್ಷಣೆ ಮಾಡುವ ಕುರಿತು ಜನಜಾಗೃತಿಗಾಗಿ ಮುಂಡರಗಿ ತಾಲೂಕು ಮಟ್ಟದ ಯುವಕರಿಗಾಗಿ ವಾಲಿಬಾಲ್ ಪಂದ್ಯಾವಳಿ ನಡೆಸಲು ಯೋಜಿಸಿದೆ.
ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿದಾಗ ಕಪ್ಪತಗುಡ್ಡದ ಅಂಚಿನ ಗ್ರಾಮಗಳ ಯುವಕರು, ಹಿರಿಯರು, ಮುಖಂಡರು ಒಂದೆಡೆ ಸೇರುವುದರಿಂದ ಒಂದೇ ವೇದಿಕೆಯಲ್ಲಿ ಕಪ್ಪತಗುಡ್ಡ ವನ್ಯಜೀವಿಧಾಮದ ಉದ್ದೇಶ, ಮಹತ್ವ ಹಾಗೂ ಬೆಂಕಿ ಹಚ್ಚುವುದರಿಂದ ಉಂಟಾಗುವ ಹಾನಿ ಕುರಿತು ಜನಜಾಗೃತಿ ಮೂಡಿಸಬಹುದು. ಜೊತೆಗೆ ತಿಳುವಳಿಕೆ ನೀಡಲು ಗದಗ ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಮುಂಡರಗಿಯ ಕಪ್ಪತ್ತಗುಡ್ಡ ಅರಣ್ಯ ವಲಯದ ಸಂಯುಕ್ತ ಆಶ್ರಯದಲ್ಲಿ ಯೋಜನೆ ಹಾಕಿಕೊಂಡಿದೆ.
ಪ್ರಸಕ್ತ ವರ್ಷ ಗದಗ ಪ್ರಾದೇಶಿಕ ಅರಣ್ಯ ವಿಭಾಗವು ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಡಿ. 21ರಂದು ಡಂಬಳ ಹೋಬಳಿ ಮಟ್ಟದ ಪಂದ್ಯಗಳು ಹಾಗೂ ಬಾಗೇವಾಡಿಯ ಟಿ.ಎಸ್. ಪ್ರೌಢಶಾಲೆಯ ಆವರಣದಲ್ಲಿ ಡಿ. 25ರಂದು ಮುಂಡರಗಿ ಹೋಬಳಿ ಮಟ್ಟದ ಪಂದ್ಯಗಳನ್ನು ಆಯೋಜಿಸಿದೆ. ಡಿ. 30ರಂದು ಮುಂಡರಗಿ ಪಟ್ಟಣದ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಆವರಣದಲ್ಲಿ ತಾಲೂಕು ಮಟ್ಟದ ಫೈನಲ್ ಪಂದ್ಯಗಳನ್ನು ಆಯೋಜಿಸಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ಅರಣ್ಯ ಇಲಾಖೆ ವತಿಯಿಂದಲೇ ಟೀಶರ್ಟ್ ವಿತರಣೆಗೆ ಕ್ರಮ ಕೈಗೊಂಡಿದ್ದು, ಪ್ರಥಮ ಬಹುಮಾನವಾಗಿ 15 ಸಾವಿರ ರೂ, ದ್ವಿತೀಯ 10 ಸಾವಿರ ರೂ ಹಾಗೂ ತೃತೀಯ ಬಹುಮಾನವಾಗಿ 5 ಸಾವಿರ ರೂ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ.
ಬೇಸಿಗೆ ಸಮಯದಲ್ಲಿ ಬೀಳುವ ಬೆಂಕಿ ಪ್ರಕರಣಗಳು ಅರಣ್ಯ ಇಲಾಖೆಯ ನಿದ್ದೆಗೆಡಿಸುತ್ತವೆ. ಕಪ್ಪತಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ ಆಮ್ಲಜನಕದಲ್ಲಿ ಏರಾಪೇರಾಗಿ ಮನುಷ್ಯ ಸಂಕುಲಕ್ಕೆ ದೊಡ್ಡ ಸಮಸ್ಯೆಯೊಡ್ಡುತ್ತದೆ. ಅಭೂತಪೂರ್ವ ಸಸ್ಯ ಸಂಪತ್ತು ಮತ್ತು ವನ್ಯಪ್ರಾಣಿಗಳ ಹಿತ ಕಾಪಾಡುವುದಕ್ಕಾಗಿ ಅರಣ್ಯ ಇಲಾಖೆ ಕಪ್ಪತಗುಡ್ಡ ಕಪ್ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿ ಗ್ರಾಮದ ಯುವಕರಲ್ಲಿ ಪರಿಸರದ ಮಹತ್ವದ ಅರಿವು ಮೂಡಿಸಲು ಮುಂದಾಗಿದೆ. ಇದರ ಸಂಪೂರ್ಣ ಸದುಪಯೋಗಕ್ಕೆ ಮುಂದಾಗಬೇಕು.
-
ಮಂಜುನಾಥ ರಾಮಣ್ಣ ಮೇಗಲಮನಿ.
ಆರ್‌ಎಫ್‌ಒ.



