ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಭಾಕಾರಂಜಿ ಕಾರ್ಯಕ್ರಮ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ನಾಯಕತ್ವ ಗುಣ, ಅಭಿವ್ಯಕ್ತಿ ಸಾಮರ್ಥ್ಯ ಮತ್ತು ಸೃಜನಶೀಲತೆಯನ್ನು ಬೆಳೆಸುತ್ತವೆ ಎಂದು ಆಂಗ್ಲೋ ಉರ್ದು ಸ್ಕೂಲ್ ಕಮಿಟಿ ಅಧ್ಯಕ್ಷ ಸರ್ಫರಾಜ್ ಅಹ್ಮದ್ ಎಸ್. ಉಮಚಗಿ ಹೇಳಿದರು.
ಶಹರದ ಅಂಜುಮನ್ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿ.ಪಂ, ಸಮಗ್ರ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಗದಗ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯಗಳ ಸಂಯೋಗದಲ್ಲಿ ನಡೆದ 8ನೇ ಕ್ಲಸ್ಟರ್ ವಿಭಾಗದ ಉರ್ದು ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಪ್ರತಿಭಾಕಾರಂಜಿ, ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಉರ್ದು ಕೇವಲ ಒಂದು ಭಾಷೆಯಲ್ಲ, ಅದು ಸಹಬಾಳ್ವೆ, ಸಹಿಷ್ಣುತೆ ಹಾಗೂ ಸಂಸ್ಕೃತಿಯ ಸಂಕೇತವಾಗಿದೆ. ಗೆಲುವು-ಸೋಲು ಜೀವನದ ಭಾಗ. ಆದರೆ ಪ್ರಯತ್ನವೇ ನಿಮ್ಮ ನಿಜವಾದ ಜಯ. ಭಯವಿಲ್ಲದೆ ಕನಸು ಕಾಣಿರಿ, ತಪ್ಪುಗಳಿಂದ ಕಲಿಯಿರಿ ಮತ್ತು ಹಿಂಜರಿಯದೆ ಮುಂದೆ ಸಾಗಿರಿ. ನಿಮ್ಮೊಳಗಿನ ಪ್ರತಿಭೆ ಒಂದು ದಿನ ನಿಮ್ಮನ್ನು ದೊಡ್ಡ ವೇದಿಕೆಗೆ ಕರೆದೊಯ್ಯಲಿದೆ. ವಿದ್ಯಾಭ್ಯಾಸದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಸಾಗಿದರೆ ನೀವು ಸಮಾಜಕ್ಕೆ ಬೆಳಕಾಗುತ್ತೀರಿ ಎಂದರು.
ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟಪ್ಪನವರು ಮಾತನಾಡಿ, ಇತ್ತೀಚಿನ ಆಧುನಿಕ, ತಂತ್ರಜ್ಞಾನ ಭರಾಟೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ, ಜನಪದ, ಕವಾಲಿ ಸೇರಿದಂತೆ ಸಾಂಪ್ರದಾಯಿಕ ಕಲೆಗಳನ್ನು ಮರೆಯುತ್ತಿದ್ದಾರೆ. ಪಾಲಕರು ಸದ್ಯ ಮಕ್ಕಳು ಚೆನ್ನಾಗಿ ಓದಬೇಕು, ಹೆಚ್ಚು ಅಂಕ ಪಡೆಯಬೇಕು ಎನ್ನುವ ಹಂಬಲದಿಂದ ಮಕ್ಕಳ ಸಾಂಸ್ಕೃತಿಕ ಮನೋಭಾವ ಕ್ಷೀಣಿಸುತ್ತಿದೆ. ಆದರೆ, ಸರ್ಕಾರದ ಯೋಜನೆಗಳನ್ನು ಮಕ್ಕಳನ್ನು ಸದೃಢವಾಗಿಸಲು ಕ್ರೀಡಾಕೂಟ, ಪ್ರತಿಭಾಕಾರಂಜಿ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಮಕ್ಕಳಲ್ಲಿ ವಿದ್ಯೆಯ ಜೊತೆಗೆ ತಮ್ಮಲ್ಲಿನ ಕೌಶಲ್ಯವನ್ನು ಹೊರಹಾಕಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಬಿಆರ್‌ಪಿ ಎಸ್.ಬಿ. ಪ್ರಭಯ್ಯನಮಠ, ಬಿಆರ್‌ಸಿ ಶಫೀ ಯರಗುಡಿ, ಸಿಆರ್‌ಪಿ ಖಲೀಲ ಜಲಗೇರಿ, ಸ್ಕೂಲ್ ಕಮಿಟಿಯ ಸದಸ್ಯರಾದ ಶಾಹನವಾಜ್ ಉಮಚಗಿ, ಎ.ಎಂ. ಮುಲ್ಲಾ, ಆರ್.ಎಲ್. ಬಾಗಲಕೋಟ, ಕೆ.ಎಂ. ಶೇಖ, ಜೀಲಾನಿ ಉಮಚಗಿ, ಮಹ್ಮದ್ ಇಕ್ಬಾಲ್ ಹಣಗಿ, ಎಸ್.ಎ. ಬಿಜಾಪೂರ ಸೇರಿದಂತೆ 8ನೇ ಕ್ಲಸ್ಟರ್ ಮಟ್ಟದ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉರ್ದು ಭಾಷಣ, ಪ್ರಬಂಧ, ಕವನ ಪಠಣ, ನಾಟಕ, ಚಿತ್ರಕಲೆ, ವಾದ–ವಿವಾದ, ಸಾಮಾನ್ಯ ಜ್ಞಾನ, ಕವಾಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳು ತಮ್ಮ ಕಲಾತ್ಮಕತೆ, ಬೌದ್ಧಿಕ ಶಕ್ತಿ ಹಾಗೂ ಆತ್ಮವಿಶ್ವಾಸದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಉರ್ದು ಭಾಷೆಯ ಸೌಂದರ್ಯ, ಸಾಹಿತ್ಯದ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಕಾರ್ಯಕ್ರಮದ ಮೂಲಕ ಜೀವಂತವಾಗಿ ಮೂಡಿಬಂತು.



