ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ‘45’ ಸಿನಿಮಾ ಬಿಡುಗಡೆಗೂ ಮುನ್ನವೇ ವಿದೇಶಗಳಲ್ಲಿ ದಾಖಲೆ ಮಟ್ಟದ ಪ್ರತಿಕ್ರಿಯೆ ಪಡೆಯುತ್ತಿದೆ. ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ಈ ಸಿನಿಮಾ, ಮೂವರು ಸ್ಟಾರ್ ನಟರುಗಳ ಒಟ್ಟುಗೂಡಿಕೆಯಿಂದಲೇ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.
ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಂಗೀತ ನಿರ್ದೇಶನದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ಹೊತ್ತಿರುವುದು ಚಿತ್ರದ ಮತ್ತೊಂದು ವಿಶೇಷ. ಸಿನಿಮಾದ ಕಥೆ ಮಾನವ, ದಾನವ ಮತ್ತು ದೇವರ ನಡುವಿನ ಸಂಬಂಧ ಹಾಗೂ ಸಂಘರ್ಷವನ್ನು ಆಧರಿಸಿದೆ.
ಚಿತ್ರತಂಡ ‘45’ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲು ಮುಂದಾಗಿದ್ದು, ದೇಶದ ಹೊರಗೂ ವ್ಯಾಪಕ ರಿಲೀಸ್ ಯೋಜನೆ ರೂಪಿಸಲಾಗಿದೆ. ಅದರ ಭಾಗವಾಗಿ ಕೆನಡಾದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಚಿತ್ರಮಂದಿರಗಳು ಸೋಲ್ಡ್ ಔಟ್ ಆಗಿವೆ.
ಭಾರತದಲ್ಲಿ ಡಿಸೆಂಬರ್ 25 ರಂದು ಸಿನಿಮಾ ಬಿಡುಗಡೆಯಾಗಲಿದ್ದರೆ, ಕೆನಡಾದಲ್ಲಿ ಡಿಸೆಂಬರ್ 23 ರಂದು, ಭಾರತಕ್ಕಿಂತ ಎರಡು ದಿನ ಮುಂಚಿತವಾಗಿ ತೆರೆಗೆ ಬರಲಿದೆ. ಕ್ರಿಸ್ಮಸ್ ಹಬ್ಬದ ರಜೆಗಳು ಇರುವ ಕಾರಣ ಕೆನಡಾದಲ್ಲಿ ‘45’ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಗಲಿದೆ ಎನ್ನುವ ನಿರೀಕ್ಷೆ ವ್ಯಕ್ತವಾಗಿದೆ. ಟ್ರೈಲರ್‌ಗೆ ದೊರೆತ ಪ್ರತಿಕ್ರಿಯೆ ಹಾಗೂ ಮುಂಗಡ ಬುಕಿಂಗ್ ವೇಗ, ‘45’ ಸಿನಿಮಾ ದೇಶ-ವಿದೇಶಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸುವ ಸೂಚನೆ ನೀಡುತ್ತಿದೆ.



