ಬೆಂಗಳೂರು: ಕಸಕ್ಕೆ ಬೆಂಕಿ ಹಾಕಿದ ಪರಿಣಾಮ ದಟ್ಟ ಹೊಗೆ ಆವರಿಸಿಕೊಂಡು ಉಸಿರಾಟದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ನಟಿ ಐಂದ್ರಿತಾ ರೈ ಜಿಬಿಎ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್‌ಆರ್ ನಗರದ ಜವರೇನಗೌಡನದೊಡ್ಡಿ ರಸ್ತೆಯಲ್ಲಿರುವ ಜಿಬಿಎಗೆ ಸೇರಿದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಿಗೆ ಸಾಕಷ್ಟು ತೊಂದರೆ ಉಂಟಾಗಿದೆ.
ಖಾಲಿ ಜಾಗವನ್ನು ಸ್ವಚ್ಛಗೊಳಿಸುವ ವೇಳೆ ಗಿಡಗಂಟಿ ಹಾಗೂ ಕಸವನ್ನು ಒಂದೇ ಕಡೆ ಸೇರಿಸಿ ಬೆಂಕಿ ಹಚ್ಚಲಾಗಿದೆ. ಇದರಿಂದ ದಟ್ಟ ಹೊಗೆ ಹರಡಿ, ಅಕ್ಕಪಕ್ಕದ ಮನೆಗಳಲ್ಲಿರುವವರು ಮಾತ್ರವಲ್ಲದೆ ರಸ್ತೆ ಮೂಲಕ ಸಂಚರಿಸುವ ವಾಹನ ಸವಾರರೂ ಸಮಸ್ಯೆ ಎದುರಿಸುವಂತಾಗಿದೆ.
ಈ ಬಗ್ಗೆ ನಟಿ ಐಂದ್ರಿತಾ ರೈ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋ ಹಂಚಿಕೊಂಡು, ಮೂರು ದಿನಗಳಿಂದ ಉಸಿರಾಟದ ತೊಂದರೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಜಿಬಿಎ ಅಧಿಕಾರಿಗಳಿಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಗದಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ನಟಿ ಮನೆಗೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಈ ಜಾಗದಿಂದ ಹೊರಡುವ ಹೊಗೆ ಮತ್ತು ದುರ್ವಾಸನೆ ಇನ್ನೂ ಕಡಿಮೆಯಾಗಿಲ್ಲ. ಆರೋಗ್ಯ ಸಮಸ್ಯೆಯ ಕಾರಣದಿಂದ ನಟಿ ತಾತ್ಕಾಲಿಕವಾಗಿ ತಾಯಿ ಮನೆಗೆ ತೆರಳಿದ್ದಾರೆ. ಸಾರ್ವಜನಿಕರಿಗೆ ಮಾದರಿ ಆಗಬೇಕಾದ ಜಿಬಿಎ ಅಧಿಕಾರಿಗಳೇ ಕಸಕ್ಕೆ ಬೆಂಕಿ ಹಾಕಿ ಸಮಸ್ಯೆ ಸೃಷ್ಟಿಸಿರುವುದರ ಬಗ್ಗೆ ಸ್ಥಳೀಯರು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.



