ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾಜಿಕ ಜೀವನಕ್ಕೆ ಪೂರಕವಾಗಿರುವ ವಿಶ್ವಕರ್ಮ ಸಮಾಜದ ಪಂಚ ಕಸುಬುಗಳು ಪಾರಂಪರಿಕತೆಯಿಂದ ಕೂಡಿವೆ. ಇಂದಿನ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ, ಕಂಪ್ಯೂಟರ್ ಡಿಸೈನ್‌ಗಳನ್ನು ಅಳವಡಿಸಿಕೊಂಡು ಕಸಬುಗಳಲ್ಲಿ ತಂತ್ರಜ್ಞಾನ ಬಳಸಿ ಸಮಾಜಬಾಂಧವರು ಆರ್ಥಿಕ ಪ್ರಗತಿ ಸಾಧಿಸುವತ್ತ ಮುಂದಡಿ ಇಡಬೇಕು ಎಂದು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಪಿ ಹೇಳಿದರು.
ಅವರು ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗಸಂಸ್ಥೆಗಳ ವತಿಯಿಂದ ರವಿವಾರ ನಗರದ ವಿಜಯನಗರ ಬಡಾವಣೆಯ ವಿಶ್ವಕರ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ 2026ರ ದಿನದರ್ಶಿಕೆ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಿಂದುಳಿದವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ವಿಶ್ವಕರ್ಮ ಅಭಿವೃದ್ಧಿ ನಿಗಮವೂ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಮಾಹಿತಿ ಪಡೆದು ಸಮಾಜಬಾಂಧವರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ ಮಾತನಾಡಿ, ಇತ್ತೀಚೆಗೆ ವಿಶ್ವಕರ್ಮ ಸಮುದಾಯ ಸಮರ್ಥವಾಗಿ ಸಂಘಟಿತವಾಗುತ್ತಿದೆ. ಇದರೊಂದಿಗೆ ರಾಜಕೀಯ ಕ್ಷೇತ್ರದಲ್ಲಿಯೂ ಛಾಪು ಮೂಡಿಸುವಂತೆ ಮುಂದಾಗಬೇಕು. ಎಲ್ಲ ರಂಗಗಳಲ್ಲಿಯೂ ನಾವು ಮುಂದೆ ಬರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಮಾತನಾಡಿ, ಮುಂಬರುವ ಸಂಘದ ದಶಮಾನೋತ್ಸವ ಆಚರಣೆಗೆ ಸರ್ವರೂ ಸಹಕಾರ ನೀಡಬೇಕು. ಜಿಲ್ಲೆಯ ಪ್ರತಿಯೊಂದು ವಿಶ್ವಕರ್ಮ ಸಮಾಜದ ಮನೆ–ಮನೆಗಳಿಗೆ 2026ರ ದಿನದರ್ಶಿಕೆಯನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.
ಚಿಕ್ಕುಂಬಿಯ ನಾಗಲಿಂಗೇಶ್ವರ ಮಠದ ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಈಶ್ವರಾಚಾರ್ಯ ಎಂ.ಪಿ, ನೌಕರರ ಸಂಘದ ನಿರ್ದೇಶಕ ಬಿ.ಎಂ. ಬಡಿಗೇರ ಸಮಾರಂಭ ಉದ್ದೇಶಿಸಿ ಮಾತನಾಡಿದರು.
2025ರ ರಾಷ್ಟ್ರೀಯ ಹಾಗೂ 2014ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ವಾಯ್. ಶಿಲ್ಪಿ (ಕಲಬುರಗಿ) ಮತ್ತು ನಾಗಲಿಂಗಪ್ಪ ಗಂಗೂರ (ಬಾಗಲಕೋಟೆ), ಗದಗ ಶ್ರೀಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಉಮೇಶ ಕೆ. ಅರ್ಕಸಾಲಿ, ಪತ್ರಕರ್ತ ಮೌನೇಶ ಸಿ. ಬಡಿಗೇರ, ಟಿವಿ ವರದಿಗಾರರಾದ ಗಿರೀಶ ಕಮ್ಮಾರ ಮತ್ತು ಮಂಜುನಾಥ ಪತ್ತಾರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವರವಿ ಕ್ಷೇತ್ರದ ಶ್ರೀಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ನರಗುಂದ, ಗೌರವಾಧ್ಯಕ್ಷ ಎ.ಎನ್. ಬಡಿಗೇರ, ನಿರ್ದೇಶಕ ಬಿ.ಎಂ. ಬಡಿಗೇರ, ಪ್ರಮುಖರಾದ ಮೌನೇಶ ಅರ್ಕಸಾಲಿ, ಶ್ರೀಧರ ಕೊಣ್ಣೂರ, ಕೆ.ಎಸ್. ಬಡಿಗೇರ, ರಿಂದಮ್ಮ ಬಡಿಗೇರ, ಶಿವಲೀಲಾ ಕೆ. ಬಡಿಗೇರ, ಪ್ರಧಾನ ಕಾರ್ಯದರ್ಶಿ ಸಿ.ವಿ. ಬಡಿಗೇರ ಉಪಸ್ಥಿತರಿದ್ದರು.
ಕೊಪ್ಪಳದ ಎಸ್.ಎನ್. ಬಡಿಗೇರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಖ.ಎಸ್. ಬಡಿಗೇರ ಸ್ವಾಗತಿಸಿದರು. ಸುಮಂಗಲಾ ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಆರ್.ಎಂ. ಬಡಿಗೇರ ವಂದಿಸಿದರು.
ಸಮಾರಂಭ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಂಸ್ಕಾರಗಳನ್ನು ಉಳಿಸಿ–ಬೆಳೆಸುವಲ್ಲಿ ವಿಶ್ವಕರ್ಮರ ಪಾತ್ರ ಮಹತ್ತರವಾಗಿದೆ. 21ನೇ ಶತಮಾನ ಜ್ಞಾನ, ವಿದ್ಯೆ, ಕೌಶಲ್ಯಗಳ ಯುಗವಾಗಿದ್ದು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮಾಜಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಣವೇ ಇಂದಿನ ಶ್ರೇಷ್ಠ ಸಿರಿವಂತಿಕೆಯಾಗಿದೆ ಎಂದರು.



