ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮತ್ತು ಹೇಟ್ ಕಮೆಂಟ್ಗಳ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಇದರ ಬಲಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸುದೀಪ್ ಹೇಳಿಕೆ ವಿವಾದದ ಬೆನ್ನಲ್ಲೇ ವಿಜಯಲಕ್ಷ್ಮೀ ವಿರುದ್ಧ ವೈಯಕ್ತಿಕ ದಾಳಿ ತೀವ್ರಗೊಂಡಿದ್ದು, ಅವರು ನೇರವಾಗಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬಂದ ಅಶ್ಲೀಲ ಕಮೆಂಟ್ಗಳು, ಬೆದರಿಕೆ ಸಂದೇಶಗಳು ಹಾಗೂ ಅವಹೇಳನಕಾರಿ ಮೆಸೇಜ್ಗಳ ಸ್ಕ್ರೀನ್ಶಾಟ್ಗಳನ್ನು ವಿಜಯಲಕ್ಷ್ಮೀ ಸೈಬರ್ ಅಪರಾಧ ವಿಭಾಗಕ್ಕೆ ಸಲ್ಲಿಸಿದ್ದಾರೆ. ಸಂಬಂಧಪಟ್ಟ ಖಾತೆಗಳ ವಿವರಗಳನ್ನು ನೀಡಿದ್ದು, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸುದೀಪ್ ಅವರು ಇತ್ತೀಚೆಗೆ ಸಿನಿಮಾ ಬಿಡುಗಡೆ ವೇಳೆ “ಯುದ್ಧಕ್ಕೆ ಸಿದ್ಧ” ಎಂಬ ಹೇಳಿಕೆ ನೀಡಿದ ನಂತರ ದರ್ಶನ್–ಸುದೀಪ್ ಅಭಿಮಾನಿಗಳ ಮಧ್ಯೆ ವಾಗ್ವಾದ ತೀವ್ರಗೊಂಡಿತ್ತು. ಈ ವಿವಾದದ ನೇರ ಪರಿಣಾಮವಾಗಿ ವಿಜಯಲಕ್ಷ್ಮೀ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಸೈಬರ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ದೂರು ಸ್ವೀಕರಿಸಿದ್ದು, ಖಾತೆಗಳ ಮೂಲ ಪತ್ತೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪ್ರಕರಣ ಇದೀಗ ಅಧಿಕೃತ ತನಿಖೆ ಹಂತಕ್ಕೆ ಪ್ರವೇಶಿಸಿದೆ.



