ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಾಲೆಯಲ್ಲಿ ಕಲಿತ ವಿದ್ಯೆಯ ಜೊತೆಗೆ ಹೊರಗಿನ ಪ್ರಪಂಚದ ಜ್ಞಾನ, ಹೊಸ ಸಂಸ್ಕೃತಿ, ಅನುಭವ ತಿಳಿಸಿಕೊಡುವ ಉದ್ದೇಶದಿಂದ ಸರಕಾರವು ಕ್ಷೇತ್ರ ಭೇಟಿಯಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಇಂತಹ ಯೋಜನೆಯ ಪ್ರಯೋಜನ ಪಡೆದು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳಬಹುದಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.4ರ ಆವರಣದಲ್ಲಿ ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿ ಹಾಗೂ ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.4 ಲಕ್ಷ್ಮೇಶ್ವರ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗಾಗಿ ಒಟ್ಟು 7 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬುಧವಾರ ಪಿ.ಎಂ.ಶ್ರೀ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಕ್ಷೇತ್ರ ಭೇಟಿ ಒಂದು ದಿನದ ಪ್ರವಾಸ ಕಾರ್ಯಕ್ರಮದ ವಾಹನಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿದರು.
ತರಗತಿಯ ಜ್ಞಾನವನ್ನು ನೈಜ ಪ್ರಪಂಚದ ಜೊತೆ ಬೆಸೆಯುವುದೇ ಕ್ಷೇತ್ರ ಭೇಟಿಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಮಹತ್ವದ ಯೋಜನೆಯಡಿ ಪಿ.ಎಂ.ಶ್ರೀ ಶಾಲೆಗಳ ಮಕ್ಕಳಿಗೆ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ. ರಸ್ತೆಗಳು ಸರಿಯಾಗಿಲ್ಲವಾದ ಕಾರಣ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಿ ಮಕ್ಕಳನ್ನು ಸುರಕ್ಷತೆಯಿಂದ ಕರೆದುಕೊಂಡು ಹೋಗಿ ಬರುವಂತೆ ಸಲಹೆ ನೀಡಿದರು.
ಪುರಸಭೆ ಮಾಜಿ ಸದಸ್ಯರಾದ ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಕಾರ್ಯದರ್ಶಿ ಚಂದ್ರು ನೇಕಾರ, ಡಿ.ಡಿ. ಲಮಾಣಿ, ಎಲ್.ಎನ್. ನಂದೆಣ್ಣವರ, ಬಸವರಾಜ ಯತ್ತಿನಹಳ್ಳಿ, ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಎಂ.ಎ. ನದಾಫ್, ಮುಖ್ಯೋಪಾಧ್ಯಾಯರುಗಳಾದ ಬಿ.ಎಂ. ಕುಂಬಾರ, ಎಚ್.ಬಿ. ಸಣ್ಣಮನಿ, ಎಸ್.ಎಚ್. ಉಮಚಗಿ, ಅಡರಕಟ್ಟಿ ಗ್ರಾಮ ಪಂಚಾಯಿತಿ ಸದಸ್ಯೆ ಕಮಲವ್ವ ಲಮಾಣಿ, ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಾದ ಶಿವಾನಂದ ಚಕ್ರಸಾಲಿ, ಮಲ್ಲೇಶಪ್ಪ ಅಡರಕಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕರು, ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಸ್ವಾಗತಿಸಿ ನಿರೂಪಿಸಿದರು. ಸಿಆರ್‌ಪಿಗಳಾದ ಉಮೇಶ ನೇಕಾರ ಹಾಗೂ ಶ್ರೀನಿವಾಸ ಮತ್ತೂರ ನಿರ್ವಹಿಸಿ ವಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಶ ಓದು-ದೇಶ ಸುತ್ತು ಎಂಬ ಮಾತಿನಂತೆ ಪ್ರವಾಸ ಕೇವಲ ಮನರಂಜನೆಯಲ್ಲ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಕೊಠಡಿಯ ಹೊರಗಿನ ಕಲಿಕೆಯು ಬಹು ಮುಖ್ಯ ಪಾತ್ರವಹಿಸುತ್ತದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ವಿಜ್ಞಾನ ಕೇಂದ್ರ, ಕರ್ನಾಟಕ ಹಾಲು ಒಕ್ಕೂಟ ಮುಂತಾದ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದರು.



