ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಮಾಂಸ ಮಾರಾಟದ ಅಂಗಡಿಗಳನ್ನು ಸ್ಥಳಾಂತರಿಸಬೇಕು ಹಾಗೂ ಬಕ್ರೀದ್ ವೇಳೆ ಗೋಹತ್ಯೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಹಾಗೂ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಬುಧವಾರ ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಶ್ರೀರಾಮ ಸೇನಾ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ಹಾಗೂ ಹಿಂದೂ ಯುವ ಮುಖಂಡ ಗಂಗಾಧರ ಮೆಣಸಿನಕಾಯಿ, ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಕೂಗಳತೆಯಲ್ಲೇ ಮೀನು, ಮಟನ್ ಹಾಗೂ ಚಿಕನ್ ಮಾರಾಟ ನಡೆಯುತ್ತಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಮಾಂಸ ಮಾರಾಟದ ಅಂಗಡಿಗಳನ್ನು 15 ದಿನಗಳೊಳಗೆ ಪಟ್ಟಣದ ಹೊರಭಾಗಕ್ಕೆ ಸ್ಥಳಾಂತರಿಸಬೇಕು. ಅಕ್ರಮ ಕಸಾಯಿಖಾನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ನೋಟಿಸ್ ಜಾರಿ ಮಾಡಿ ತೆರವುಗೊಳಿಸಬೇಕು. ಬಕ್ರೀದ್ ವೇಳೆ ಗೋಹತ್ಯೆ ಹಾಗೂ ಅಕ್ರಮ ಮಾಂಸ ಮಾರಾಟ ನಡೆಯದಂತೆ ಪೊಲೀಸ್ ಇಲಾಖೆ ಹಾಗೂ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಶಾಲೆ ಹಾಗೂ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿ ಕೇಸರಿ ಶಾಲು ನಿರ್ಬಂಧಿಸುವ ಸರ್ಕಾರದ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲವಾದರೆ ಹಿಂದೂ ಸಂಘಟನೆಗಳಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದುಂಡೇಶ ಕೋಟಗಿ, ವಿಜಯ ಕುಂಬಾರ, ಶಕ್ತಿ ಕತ್ತಿ, ವಿಶಾಲ ಬಟಗುರ್ಕಿ, ನವೀನ ಹಿರೇಮಠ, ಮಹಾಂತೇಶ ರಗಟಿ, ಅಮಿತ ಗುಡಗೇರಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.



