ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಕೆ. ನೇಮಿರಾಜ ನಾಯ್ಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಮಣ್ಣಿನ ಫಲವತ್ತತೆಯನ್ನು ಹಾಳುಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರು ಕೊಟ್ಟಿಗೆ ಗೊಬ್ಬರ ಸೇರಿದಂತೆ ಸಾವಯವ ಪದ್ಧತಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಇಂದಿನ ಜಾಗತಿಕ ಯುದ್ಧ ಪರಿಸ್ಥಿತಿಯಲ್ಲಿ ರಾಸಾಯನಿಕ ಗೊಬ್ಬರಗಳ ಲಭ್ಯತೆ ವ್ಯತ್ಯಯವಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ರೈತರು ನ್ಯಾನೋ ಯೂರಿಯಾ ಹಾಗೂ ಲಿಕ್ವಿಡ್ ಡಿಎಪಿ ಸಿಂಪಡಣೆ ಮೂಲಕ ಬೆಳೆಗಳನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿನ ಹಂಪಸಾಗರ, ತಂಬ್ರಹಳ್ಳಿ, ಕೋಗಳಿ, ಹಗರಿಬೊಮ್ಮನಹಳ್ಳಿ ಹಾಗೂ ಎಪಿಎಂಸಿ ಆವರಣದಲ್ಲಿ ಒಟ್ಟು ಐದು ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಬಿ. ಪಾಟೀಲ್ ಮಾತನಾಡಿ, ರೈತರಿಗೆ ಅಗತ್ಯವಿರುವ 270 ಕ್ವಿಂಟಲ್ ಬಿತ್ತನೆ ಬೀಜ ಸಂಗ್ರಹವಿದ್ದು, ಪಹಣಿ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ನೀಡಿ ಬೀಜ ಖರೀದಿಸಬಹುದು ಎಂದು ತಿಳಿಸಿದರು. 2, 3, 4 ಮತ್ತು 5 ಕೆಜಿ ಪ್ಯಾಕೆಟ್‌ಗಳಲ್ಲಿ ಬಿತ್ತನೆ ಬೀಜ ಲಭ್ಯವಿದ್ದು, ಎಫ್‌ಐಡಿ ನಿಯಮಾನುಸಾರ ಎಸ್‌ಸಿ ಮತ್ತು ಎಸ್‌ಟಿ ವರ್ಗದ ರೈತರಿಗೆ ರೂ.30 ಹಾಗೂ ಸಾಮಾನ್ಯ ವರ್ಗದ ರೈತರಿಗೆ ರೂ.20 ಸಬ್ಸಿಡಿ ನೀಡಲಾಗುವುದು ಎಂದರು. ರೈತರಿಗೆ ಯಾವುದೇ ರೀತಿಯ ಬಿತ್ತನೆ ಬೀಜ ಕೊರತೆ ಉಂಟಾಗದಂತೆ ಸಾಕಷ್ಟು ಪ್ರಮಾಣದಲ್ಲಿ ಬೀಜ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹನಸಿ ದೇವರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ್, ಸಿನಿಮಾ ಮಂಜಣ್ಣ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಕಾರ್ಯದರ್ಶಿ ಪಾಂಡುರಂಗ ನಾಯ್ಕ, ಮುಖಂಡರಾದ ಕೋಗಳಿ ಹನುಮಂತಪ್ಪ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಿದ್ದರಾಜು, ಕೃಷಿ ಇಲಾಖೆಯ ಅಧಿಕಾರಿಗಳಾದ ಭೋಜ ನಾಯ್ಕ, ನಾಗಾರ್ಜುನ, ಶಶಿಕುಮಾರ್, ಶಿವಮೂರ್ತಿ ಸೇರಿದಂತೆ ರೈತರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
“ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತಿದೆ. ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು.”ಕೆ. ನೇಮಿರಾಜ ನಾಯ್ಕ, ಶಾಸಕ



