ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಂಗಳವಾರ ಸಂಜೆ ನರೇಗಲ್ಲ ಹೋಬಳಿಯಲ್ಲಿ ಬೀಸಿದ ಬಿರುಗಾಳಿ ಹಾಗೂ ರಭಸದ ಮಳೆಗೆ ಮರವೊಂದು ಉರುಳಿ ಶಾಲಾ ವಾಹನ ಜಖಂಗೊಂಡ ಘಟನೆ ನಡೆದಿದೆ.
ಪಟ್ಟಣದ ಶ್ರೀ ಅನ್ನದಾನೇಶ್ವರ ಮಠದ ಆವರಣದಲ್ಲಿದ್ದ ತೇಗಿನ ಮರದ ದೊಡ್ಡ ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ, ವಿದ್ಯುತ್ ಕಂಬಗಳು ಮುರಿದು ಮುಂದೆ ನಿಂತಿದ್ದ ಶಾಲಾ ವಾಹನದ ಮೇಲೆ ಬಿದ್ದವು. ಪರಿಣಾಮ ಬಸ್‌ಗೆ ಹಾನಿಯಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ಗುಡುಗು, ಮಿಂಚು ಹಾಗೂ ಸಿಡಿಲಿನೊಂದಿಗೆ ಆರ್ಭಟಿಸಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ನರೇಗಲ್ಲ ಪಟ್ಟಣದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಿರುಗಾಳಿಯ ರಭಸಕ್ಕೆ ಕೆಲ ಮನೆಗಳ ತಗಡುಗಳು ಸಪ್ಪಳ ಮಾಡಿದ್ದು, ಜನರು ಆತಂಕಗೊಂಡರು.
ಈಗಾಗಲೇ ಹೆಸರು ಬಿತ್ತಿದ ರೈತರಿಗೆ ಮಳೆ ಆಸರೆಯಾಗಿದ್ದು, ಮುಂದಿನ ಬಿತ್ತನೆ ಕಾರ್ಯಕ್ಕೂ ಹೊಲಗದ್ದೆಗಳಲ್ಲಿ ತೇವಾಂಶ ಹೆಚ್ಚಾಗಿದೆ.
ಬುಧವಾರ ಬೆಳಗ್ಗೆಯೂ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕಾಲೇಜು ಸಮಯದಲ್ಲಿ ಸುರಿದ ಮಳೆಯಿಂದ ವಿದ್ಯಾರ್ಥಿಗಳು ಪರದಾಡಬೇಕಾಯಿತು.
ಕಳೆದ ಮಾರ್ಚ್ ತಿಂಗಳಿಂದ ತೀವ್ರ ಬಿಸಿಲಿಗೆ ಬೇಸತ್ತಿದ್ದ ಜನರಿಗೆ ಈ ಮಳೆ ತಂಪಿನ ಅನುಭವ ನೀಡಿದ್ದು, “ನರೇಗಲ್ಲ ಈಗ ಥಂಡಾ ಕೂಲ್” ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.



