ಉದ್ದ ತಲೆಕೂದಲಿನ ಸುಂದರಿ ಎಂದೇ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದ ನಟಿ ಸಂಗೀತ ಭಟ್ ತಮ್ಮ ಗುರುತನ್ನೇ ತ್ಯಾಗ ಮಾಡಿದ್ದಾರೆ. ಹೇರ್‌ಸ್ಟೈಲ್ ಬದಲಾವಣೆಗಾಗಿ ಅಲ್ಲ, ಬದಲಿಗೆ ಮಾನವೀಯ ಕಾರಣಕ್ಕಾಗಿ ಅವರು ತಮ್ಮ ನೀಳ ಜಡೆಯನ್ನೇ ಕಟ್ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಗರ್ಭಕೋಶ ಸಂಬಂಧಿತ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ಸಂಗೀತ ಭಟ್, ನಂತರ ಕೂದಲು ಉದುರುವ ಸಮಸ್ಯೆಯನ್ನು ಎದುರಿಸಿದ್ದರು. ಈ ಹಿನ್ನೆಲೆ ಕೂದಲನ್ನು ಕಟ್ ಮಾಡುವ ನಿರ್ಧಾರ ಕೈಗೊಂಡ ಅವರು, ಕಟ್ ಮಾಡಿದ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳ ತಲೆಕೂದಲು ರೀಪ್ಲಾಂಟೇಷನ್‌ಗೆ ನೀಡಲು ಮುಂದಾಗಿದ್ದಾರೆ.
ವೈಯಕ್ತಿಕ ಸಂಕಷ್ಟದ ನಡುವೆಯೂ ಮತ್ತೊಬ್ಬರ ಬದುಕಿಗೆ ನಗು ತರಬೇಕೆಂಬ ಸಂಕಲ್ಪ ಸಂಗೀತ ಭಟ್ ಅವರ ಈ ನಡೆಗೆ ವಿಶೇಷ ಮೆರಗು ತಂದಿದೆ. ಸಿನೆಮಾ ಪರದೆ ಹೊರಗೂ ಮಾನವೀಯತೆಯ ನಾಯಕಿಯಾಗಿರುವ ನಟಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.



