ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಇದೀಗ ತಮ್ಮ ಜೀವನದ ಹೊಸ ಪಯಣ ಆರಂಭಿಸಲು ಸಜ್ಜಾಗಿದ್ದಾರೆ. ಮಂಡ್ಯ ಮೂಲದ ಪಾವನಾ ಅವರೊಂದಿಗೆ ಚಿಕ್ಕಣ್ಣ ಅವರ ವಿವಾಹ ನಿಶ್ಚಯವಾಗಿದ್ದು, ಮದುವೆ ದಿನಾಂಕವೂ ಅಂತಿಮವಾಗಿದೆ.
ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಆಗಸ್ಟ್ 29 ಮತ್ತು 30ರಂದು ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ. ಈ ಮದುವೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸೇರಿದಂತೆ ಹಲವು ಗಣ್ಯರು ಆಗಮಿಸುವ ನಿರೀಕ್ಷೆಯಿದೆ.
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಅವರು ಚಿಕ್ಕಣ್ಣ ಅವರ ಬಾಳ ಸಂಗಾತಿಯಾಗಲಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿರುವ ಪಾವನಾ ಅವರೊಂದಿಗೆ ಚಿಕ್ಕಣ್ಣ ಹೊಸ ಜೀವನ ಆರಂಭಿಸಲಿದ್ದಾರೆ. 2025ರ ಆಗಸ್ಟ್‌ನಲ್ಲೇ ಇವರ ವಿವಾಹ ನಿಶ್ಚಯವಾಗಿತ್ತು.
ಹೋರಾಟದ ಹಾದಿಯಲ್ಲಿ ಬೆಳೆದ ನಟ
ಮೈಸೂರಿನ ಬಲ್ಲಹಳ್ಳಿಯಲ್ಲಿ ಜನಿಸಿದ ಚಿಕ್ಕಣ್ಣ ಅವರ ಸಿನಿ ಪಯಣ ಸಾಮಾನ್ಯವಾಗಿರಲಿಲ್ಲ. ಎಸ್‌ಎಸ್‌ಎಲ್‌ಸಿ ಶಿಕ್ಷಣದ ಬಳಿಕ ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದ ಅವರು, ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿ ಹೊಂದಿದ್ದರು.
ನಂತರ ಆರ್ಕೆಸ್ಟ್ರಾಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ ಚಿಕ್ಕಣ್ಣ ಕಿರುತೆರೆಗೆ ಕಾಲಿಟ್ಟರು. ಬಳಿಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ ತಮ್ಮದೇ ಆದ ಛಾಪು ಮೂಡಿಸಿದರು.
ನಟ ಯಶ್ ಅಭಿನಯದ ‘ಕಿರಾತಕ’ ಸಿನಿಮಾ ಚಿಕ್ಕಣ್ಣ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಆ ಬಳಿಕ ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡ ಅವರು, ತಮ್ಮ ವಿಶಿಷ್ಟ ಹಾಸ್ಯ ಶೈಲಿಯಿಂದ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಇದೀಗ ಹಾಸ್ಯ ನಟನಾಗಿ ಮಾತ್ರವಲ್ಲದೆ ನಾಯಕ ನಟನಾಗಿಯೂ ಗುರುತಿಸಿಕೊಂಡಿರುವ ಚಿಕ್ಕಣ್ಣ, ವೈವಾಹಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ. ಅವರ ಹೊಸ ಬದುಕಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.



