ಶಿಲ್ಲಾಂಗ್: ಹನಿಮೂನ್ ವೇಳೆ ಪತಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಸೋನಮ್ ರಘುವಂಶಿ ಕೊನೆಗೂ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಸೋನಮ್ ಅವರು ಶಿಲ್ಲಾಂಗ್‌ನ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿದ್ದು, ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಈಸ್ಟ್ ಖಾಸಿ ಹಿಲ್ಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯಮ್ ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸೋನಮ್ ರಘುವಂಶಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ.
ವಿಚಾರಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ, ಸೋನಮ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಜುಲೈ 23ರಂದು ರದ್ದುಗೊಳಿಸಿತ್ತು. ಅಲ್ಲದೆ ಮೂರು ವಾರಗಳೊಳಗೆ ನ್ಯಾಯಾಲಯದ ಮುಂದೆ ಶರಣಾಗುವಂತೆ ಆದೇಶಿಸಿತ್ತು.
ಒಂದು ವೇಳೆ ಮುಂದಿನ ಆರು ತಿಂಗಳ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.
ಏನಿದು ಹನಿಮೂನ್ ಹತ್ಯೆ ಪ್ರಕರಣ?
2025ರ ಮೇ 23ರಂದು ಮೇಘಾಲಯದ ಸೋಹ್ರಾ ಪ್ರದೇಶಕ್ಕೆ ಹನಿಮೂನ್‌ಗೆ ತೆರಳಿದ್ದ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ನಾಪತ್ತೆಯಾಗಿದ್ದರು. ಬಳಿಕ ಜೂನ್ 2ರಂದು ರಾಜಾ ರಘುವಂಶಿ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು.
ತನಿಖೆ ವೇಳೆ ಪತಿಯನ್ನು ಹತ್ಯೆ ಮಾಡಲು ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿ ಸುಪಾರಿ ಕಿಲ್ಲರ್‌ಗಳ ನೆರವು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ಸೋನಮ್ ಅವರನ್ನು ಕಳೆದ ವರ್ಷ ಜೂನ್‌ನಲ್ಲಿ ಬಂಧಿಸಲಾಗಿತ್ತು.



