ನವದೆಹಲಿ: ಅಸಾಧಾರಣ ಸಂದರ್ಭಗಳಲ್ಲಿ ಪೊಲೀಸರಿಗೆ ಪೆಲೆಟ್ ಗನ್ ಬಳಕೆಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ತ್ವರಿತ ಕಾರ್ಯಾಚರಣೆ ಪಡೆಯ (RAF) ಮದ್ದುಗುಂಡುಗಳ ದಾಖಲೆಗಳನ್ನು ಸಂರಕ್ಷಿಸುವಂತೆ ಸೂಚಿಸಿದೆ.
ಪೆಲೆಟ್ ಗನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPRD) ನೀಡಿರುವ ಸಲಹೆಯನ್ನು ಉಲ್ಲೇಖಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್‌ಮಲ್ಯಾ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿತು.
ಅಸಾಧಾರಣ ಪರಿಸ್ಥಿತಿಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಪೆಲೆಟ್ ಗನ್‌ಗಳನ್ನು ಬಳಸಬಹುದಾಗಿದೆ ಎಂದು ಪೀಠ ತಿಳಿಸಿದ್ದು, ಇದರ ಬಳಕೆಯ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದೆ.
ಇದೇ ವೇಳೆ, ಪ್ರತಿಭಟನೆ ಸಂದರ್ಭದಲ್ಲಿ ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಹಿರಿಯ ವಕೀಲೆ ವೃಂದಾ ಗ್ರೋವರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ನಿಯೋಜಿಸಲಾಗಿದ್ದ ಆರ್‌ಎಎಫ್ ಸಿಬ್ಬಂದಿಯ ಮದ್ದುಗುಂಡು ಬಳಕೆಯ ದಾಖಲೆಗಳನ್ನು ಸಂರಕ್ಷಿಸುವಂತೆ ಸೂಚಿಸಿದೆ.
ಮಾಜಿ ಕೇಂದ್ರ ಮಾಹಿತಿ ಆಯುಕ್ತ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಸಾರ್ವಜನಿಕ ಸಭೆಗಳನ್ನು ಚದುರಿಸಲು ಪಂಪ್ ಆಕ್ಷನ್ ಅಥವಾ ಪ್ರೊಜೆಕ್ಟೈಲ್ ಆಕ್ಷನ್ ಗನ್‌ಗಳ ಮೂಲಕ ಬಳಸುವ ಲೋಹದ ಪೆಲೆಟ್ ಮದ್ದುಗುಂಡುಗಳನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮನವಿ ಮಾಡಿದ್ದರು.
ಪೆಲೆಟ್ ಗನ್ ಬಳಕೆಯಿಂದ ಉಂಟಾಗುವ ಗಾಯಗಳು ಹಾಗೂ ಬಲಪ್ರಯೋಗದ ಕ್ರಮಗಳು ಸಂವಿಧಾನದ ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಇದರ ಜೊತೆಗೆ, ಪ್ರತಿಭಟನೆ ವೇಳೆ ಪೆಲೆಟ್ ಗುಂಡೇಟಿನಿಂದ ಗಾಯಗೊಂಡಿದ್ದೇವೆ ಎಂದು ಹೇಳಿಕೊಂಡಿರುವ ಇಬ್ಬರು ಯುವಕರು ಸಂವಿಧಾನದ 32ನೇ ವಿಧಿಯಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಗಾಯಾಳುಗಳಿಗೆ ಪರಿಹಾರ, ಸಮಗ್ರ ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿ ಸೌಲಭ್ಯ ಕಲ್ಪಿಸುವಂತೆ ಕೋರಿದ್ದಾರೆ.



