HomeIndia Newsನೀಲಿ ಜೆರ್ಸಿಗೆ ಗುಡ್‌ಬೈ ಹೇಳಿದ ಹಾಕಿ ಇಂಡಿಯಾ: ಕೇಸರಿ ಕಿಟ್‌ ಪರಿಚಯಕ್ಕೆ ಮಾಜಿ ನಾಯಕನ ಅಸಮಾಧಾನ

ನೀಲಿ ಜೆರ್ಸಿಗೆ ಗುಡ್‌ಬೈ ಹೇಳಿದ ಹಾಕಿ ಇಂಡಿಯಾ: ಕೇಸರಿ ಕಿಟ್‌ ಪರಿಚಯಕ್ಕೆ ಮಾಜಿ ನಾಯಕನ ಅಸಮಾಧಾನ

For Dai;y Updates Join Our whatsapp Group

ನವದೆಹಲಿ: ಮುಂಬರುವ ಹಾಕಿ ವಿಶ್ವಕಪ್‌ಗೂ ಮುನ್ನ ಹಾಕಿ ಇಂಡಿಯಾ ಮಹತ್ವದ ಬದಲಾವಣೆಯೊಂದನ್ನು ಮಾಡಿದ್ದು, ಭಾರತೀಯ ಪುರುಷ ಹಾಗೂ ಮಹಿಳಾ ತಂಡಗಳ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಹಲವು ವರ್ಷಗಳಿಂದ ತಂಡದ ಗುರುತಾಗಿದ್ದ ಸಾಂಪ್ರದಾಯಿಕ ನೀಲಿ ಬಣ್ಣಕ್ಕೆ ಬದಲಾಗಿ ಇದೀಗ ಕೇಸರಿ ಬಣ್ಣದ ಜೆರ್ಸಿಯನ್ನು ಪರಿಚಯಿಸಲಾಗಿದ್ದು, ಈ ನಿರ್ಧಾರ ಭಾರಿ ಚರ್ಚೆಗೆ ಕಾರಣವಾಗಿದೆ.

ಹೊಸ ಕಿಟ್‌ನಲ್ಲಿ ಕೇಸರಿ ಬಣ್ಣದ ಜೆರ್ಸಿಯ ಜೊತೆಗೆ ಬಿಳಿ ಬಣ್ಣದ ಪರ್ಯಾಯ ಜೆರ್ಸಿಯನ್ನೂ ಸೇರಿಸಲಾಗಿದೆ. ಮುಂಬರುವ ಪುರುಷರ ಹಾಕಿ ವಿಶ್ವಕಪ್‌ ಆಗಸ್ಟ್‌ 14ರಿಂದ 30ರವರೆಗೆ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿದ್ದು, ಮಹಿಳೆಯರ ವಿಶ್ವಕಪ್‌ ಆಗಸ್ಟ್‌ 15ರಿಂದ 30ರವರೆಗೆ ಆಯೋಜನೆಗೊಳ್ಳಲಿದೆ.

ಆದರೆ ಜೆರ್ಸಿಯ ಬಣ್ಣ ಬದಲಾವಣೆಗೆ ಭಾರತದ ಮಾಜಿ ಹಾಕಿ ನಾಯಕ ವೀರೇನ್ ರಸ್ಕಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ಹಾಕಿ ತಂಡದ ಪರಂಪರೆ ಹಾಗೂ ಗುರುತು ಎಂದಿಗೂ ನೀಲಿ ಬಣ್ಣದೊಂದಿಗೆ ಬೆಸೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ವೀರೇನ್ ರಸ್ಕಿನ್ಹಾ, ಹಾಕಿ ಇಂಡಿಯಾ ಭಾರತೀಯ ಹಾಕಿಗಾಗಿ ಹಲವು ಉತ್ತಮ ಕೆಲಸಗಳನ್ನು ಮಾಡಿದೆ. ಆದರೆ ಈ ನಿರ್ಧಾರ ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ.

“ಭಾರತ ತಂಡದ ಗುರುತು ಯಾವಾಗಲೂ ನೀಲಿ ಬಣ್ಣವಾಗಿತ್ತು. ನಾನು ಹಲವು ವರ್ಷಗಳ ಕಾಲ ಹೆಮ್ಮೆಯಿಂದ ನೀಲಿ ಜೆರ್ಸಿ ಧರಿಸಿದ್ದೇನೆ. ಅಭಿಮಾನಿಗಳು ಕೂಡ ಭಾರತ ತಂಡವನ್ನು ನೀಲಿ ಬಣ್ಣದಲ್ಲೇ ನೋಡಲು ಬಯಸುತ್ತಾರೆ. ಏಕಾಏಕಿ ಕೇಸರಿ ಬಣ್ಣಕ್ಕೆ ಬದಲಾವಣೆ ಮಾಡುವ ಅಗತ್ಯ ಏನಿತ್ತು?” ಎಂದು ಪ್ರಶ್ನಿಸಿದ್ದಾರೆ.

ಇನ್ನು ಜೆರ್ಸಿ ಬದಲಾವಣೆಯ ಬಗ್ಗೆ ಸ್ಪಷ್ಟನೆ ನೀಡಿರುವ ಹಾಕಿ ಇಂಡಿಯಾ, ಇದು ಯಾವುದೇ ರಾಜಕೀಯ ಕಾರಣದಿಂದ ತೆಗೆದುಕೊಂಡ ನಿರ್ಧಾರವಲ್ಲ ಎಂದು ತಿಳಿಸಿದೆ.

ಅಂತಾರಾಷ್ಟ್ರೀಯ ಹಾಕಿ ಮೈದಾನಗಳ ಟರ್ಫ್‌ಗಳು ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿರುವುದರಿಂದ ಆಟಗಾರರ ಗೋಚರತೆಗೆ ಸಮಸ್ಯೆಯಾಗುತ್ತಿತ್ತು. ನೀಲಿ ಜೆರ್ಸಿ ಮೈದಾನದ ಬಣ್ಣದೊಂದಿಗೆ ಬೆರೆತು ಕಾಣಿಸುತ್ತಿದ್ದ ಕಾರಣ ಹೊಸ ಬಣ್ಣದ ಆಯ್ಕೆ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ಹೇಳಿದೆ.

ತರಬೇತುದಾರರು ಮತ್ತು ಆಟಗಾರರ ಸಲಹೆಯ ಬಳಿಕ ಹಳದಿ ಹಾಗೂ ಕೇಸರಿ ಬಣ್ಣಗಳನ್ನು ಪರಿಶೀಲಿಸಲಾಗಿದ್ದು, ಅಂತಿಮವಾಗಿ ಕೇಸರಿಯನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರಧ್ವಜದ ಪ್ರಮುಖ ಬಣ್ಣವಾಗಿರುವ ಕೇಸರಿ ಧೈರ್ಯ, ತ್ಯಾಗ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ ಎಂದು ಹಾಕಿ ಇಂಡಿಯಾ ಸಮರ್ಥಿಸಿಕೊಂಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img