ಗಜೇಂದ್ರಗಡ: ಕೋಳಿ ಫಾರ್ಮ್ನಿಂದ ಬರುತ್ತಿದ್ದ ತೀವ್ರ ಗಬ್ಬು ವಾಸನೆಯಿಂದ ಬೇಸತ್ತ ಗ್ರಾಮಸ್ಥರು ಫಾರ್ಮ್ಗೆ ನುಗ್ಗಿ ಕೋಳಿ ಹಾಗೂ ಮೊಟ್ಟೆಗಳನ್ನು ತೆಗೆದುಕೊಂಡು ತೆರಳಿದ ಘಟನೆ ಗಜೇಂದ್ರಗಡ ಸಮೀಪದ ಉಣಚಗೇರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ಮಧ್ಯದಲ್ಲಿರುವ ಕೋಳಿ ಫಾರ್ಮ್ನಿಂದ ದಿನನಿತ್ಯ ಬರುತ್ತಿರುವ ದುರ್ವಾಸನೆಯಿಂದ ಜೀವನ ನಡೆಸುವುದು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮನೆಯೊಳಗೆ ಇರಲು ಆಗದ ಸ್ಥಿತಿ ನಿರ್ಮಾಣವಾಗಿದ್ದು, ದುರ್ವಾಸನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಈ ಸಂಬಂಧ ಕೋಳಿ ಫಾರ್ಮ್ ಅನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಹಲವು ಬಾರಿ ತಹಸೀಲ್ದಾರ್ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನಗೊಂಡ ಗ್ರಾಮಸ್ಥರು ಇಂದು ಕೋಳಿ ಫಾರ್ಮ್ಗೆ ನುಗ್ಗಿ ಅಲ್ಲಿ ಇದ್ದ ಕೋಳಿಗಳು ಮತ್ತು ಮೊಟ್ಟೆಗಳನ್ನು ತೆಗೆದುಕೊಂಡು ತೆರಳಿದ್ದಾರೆ.



