ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಿಲ್ಲಿ ಗದಗ ತಾಲೂಕಿನ 36 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ಇಲ್ಲಿಯ ಸರಕಾರಿ ಮಾದರಿ ದ್ವಿಭಾಷಾ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಗದಗ ಗ್ರಾಮೀಣ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಲಕ್ಕುಂಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಲಕ್ಕುಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ದಿಸೆಯಲ್ಲಿ ಬೇಗನೆ ಪೂರ್ವ ಪ್ರಾಥಮಿಕ ಸರಕಾರಿ ಶಾಲೆ ಆರಂಭವಾದರೆ 1ನೇ ತರಗತಿಗೆ ಅದೇ ಮಕ್ಕಳು ಪ್ರವೇಶ ಪಡೆಯುತ್ತಾರೆ ಎಂಬ ಉದ್ದೇಶದಿಂದ 36 ಕಡೆ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುತ್ತಿದ್ದೇವೆ. ಇದಕ್ಕೆ ಗ್ರಾಮ ಪಂಚಾಯಿತಿ, ಎಸ್‌ಡಿಎಂಸಿ, ಗ್ರಾಮಸ್ಥರ ಸಹಕಾರ ಬೇಕು ಎಂದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಎಸ್.ಎಚ್. ಶೆಟ್ಟಿನಾಯ್ಕರ, ಪಿಡಿಓ ಅಮೀರನಾಯಕ ಮಾತನಾಡಿದರು. ಸಿಆರ್‌ಪಿ ಕೆ.ಟಿ. ಮೀರಾನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಗವಿಶಿದ್ದಪ್ಪ ಯಲಿಶಿರುಂಜ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹದ ನಿರ್ದೇಶಕ ಶಂಕರ ಹಡಗಲಿ, ಗ್ರಾ.ಪಂ ಸದಸ್ಯರಾದ ಅನಸಮ್ಮ ಅಂಬಕ್ಕಿ, ಕುಬೇರಪ್ಪ ಬೆಂತೂರು, ಅಶೋಕ ಬೂದಿಹಾಳ, ಎನ್.ಎಚ್. ಪಾಟೀಲ, ಎಸ್.ಬಿ. ಹೊರಕೇರಿ, ಪಿ.ಎಂ. ಅಯ್ಯನಗೌಡರ, ರಮಜಾನಸಾಬ ತಹಸೀಲ್ದಾರ, ಪವಿತ್ರಾ ಬಣವಿ, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಪಿ.ಎನ್. ಶಿರೋಳ ಸ್ವಾಗತಿಸಿದರು. ಅಂಜನಾ ಕರಿಯಲ್ಲಪ್ಪನವರ ನಿರೂಪಿಸಿ ವಂದಿಸಿದರು.
ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲೆ ಮರೆಯ ಕಾಯಿಯಂತೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಈ ವೇದಿಕೆಯು ಸಹಕಾರಿಯಾಗಿದೆ. ಶಿಕ್ಷಕರು ಮಕ್ಕಳಲ್ಲಿಯ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ತಮ್ಮಲ್ಲಿಯ ಎಲ್ಲ ಶಿಕ್ಷಣವನ್ನು ಧಾರೆ ಎರೆದು ಅವರ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮ ವಹಿಸಬೇಕು. ಈ ದಿಸೆಯಲ್ಲಿ ಗ್ರಾಮ ಪಂಚಾಯಿತಿಯು ಶಿಕ್ಷಣ ಅಭಿವೃದ್ಧಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ ಎಂದರು.



