ಮೈಸೂರು: ರಿಂಗ್ ರಸ್ತೆಯಲ್ಲಿರುವ ಫಾಕ್ಸ್ಡೆನ್ ಲಿಕ್ಕರ್ ಗ್ಯಾರೇಜ್ ಪಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಯ ನಂತರ ಪಬ್ ಮಾಲೀಕ ಹಾಗೂ ನಟ ಪ್ರೀತಂ ಪುನೀತ್ ಅವರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವೇ ಎಂಬ ಪ್ರಶ್ನೆ ಎದ್ದಿದೆ.
ಪಬ್‌ನಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಲೈಸೆನ್ಸ್ ಅವಧಿ ಮುಗಿದಿದ್ದರೂ ನವೀಕರಣ ಮಾಡಿಸದೇ ವ್ಯವಹಾರ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ ಫೈರ್ ಎಕ್ಸಿಟ್ ಇಲ್ಲದಿರುವುದು ಹಾಗೂ ಅಗ್ನಿಶಾಮಕ ವ್ಯವಸ್ಥೆ ಕೊರತೆಯೂ ಕಂಡುಬಂದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಶಂಕೆಯಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಮೇಲ್ಮಹಡಿಗೆ ವ್ಯಾಪಿಸಿದೆ. ಒಳಾಂಗಣದಲ್ಲಿ ಮರದ ಅಲಂಕಾರ ಮತ್ತು ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳಿದ್ದ ಕಾರಣ ಅವಘಡ ತೀವ್ರಗೊಂಡಿದೆ.
ಘಟನೆಯಲ್ಲಿ ಸಾಹಿನ್ (ಡಾರ್ಜಿಲಿಂಗ್) ಹಾಗೂ ಪ್ರಕಾಶ್ (ನೇಪಾಳ) ಮೃತಪಟ್ಟಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ 15ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.



