ಮೈಸೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಸಹೋದರ ಎನ್.ಜೆ. ವಾಸುದೇವನ್ (92) ಅವರು ಇಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಮೈಸೂರು ಜಿಲ್ಲೆಯ ಬನ್ನೂರು ಸಮೀಪದ ಚಾಮನಹಳ್ಳಿಯಲ್ಲಿರುವ ಸಾಕು ಮಗಳ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಸುದೇವನ್ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು. ಆದರೆ ಇಂದು ಬೆಳಿಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಂತ್ಯಕ್ರಿಯೆ ಇಂದು ಸಂಜೆ ರಂಗರಾಜಪುರದಲ್ಲಿ ನೆರವೇರಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ವಿಶೇಷವೆಂದರೆ, ಜಯಲಲಿತಾ ಕುಟುಂಬದ ಆಂತರಿಕ ಸಂಬಂಧಗಳು ಮತ್ತು ಆಸ್ತಿ ವಿವಾದಗಳ ಹಿನ್ನೆಲೆಯಲ್ಲಿ ವಾಸುದೇವನ್ ಅವರ ಹೆಸರು ಹಿಂದೆ ಕಾನೂನು ಚರ್ಚೆಗಳಲ್ಲೂ ಪ್ರಸ್ತಾಪವಾಗಿತ್ತು. ಜಯಲಲಿತಾ ಅವರ ನಿಧನದ ನಂತರ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಆಸ್ತಿಯಲ್ಲಿ ಪಾಲು ಕೋರಿ ಸಲ್ಲಿಸಿದ್ದ ಅರ್ಜಿ ಗಮನ ಸೆಳೆದಿತ್ತು.
ಕಾನೂನು ಹೋರಾಟದಲ್ಲಿ ಅವರು ಜಯಲಲಿತಾ ಅವರ ನೇರ ವಾರಸುದಾರರು ಎಂದು ಹೇಳಿಕೊಂಡಿದ್ದರು. ಆದರೆ ನ್ಯಾಯಾಲಯವು ಜ. ದೀಪಾ ಮತ್ತು ಜ. ದೀಪಕ್ ಅವರನ್ನು ಕಾನೂನುಬದ್ಧ ವಾರಸುದಾರರು ಎಂದು ಗುರುತಿಸಿತ್ತು.
ಇದೀಗ ಅವರ ನಿಧನದೊಂದಿಗೆ ಜಯಲಲಿತಾ ಕುಟುಂಬದ ಮತ್ತೊಂದು ಅಧ್ಯಾಯ ಅಂತ್ಯಗೊಂಡಂತಾಗಿದೆ ಎಂದು ಹೇಳಲಾಗುತ್ತಿದೆ.



