ನವದೆಹಲಿ: ಔಷಧಿಗಳ ದುರುಪಯೋಗ ತಡೆ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಸಿರಪ್ ಖರೀದಿಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ 1945ರ ಔಷಧ ನಿಯಮಾವಳಿಗಳಿಗೆ ತಿದ್ದುಪಡಿ ತಂದಿದ್ದು, ವೇಳಾಪಟ್ಟಿ-K ಅಡಿಯಲ್ಲಿ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಯಿಂದ ‘ಸಿರಪ್ಗಳು’ ಎಂಬ ವರ್ಗವನ್ನು ತೆಗೆದುಹಾಕಿದೆ. ಇದರೊಂದಿಗೆ ಸಿರಪ್ ಆಧಾರಿತ ಔಷಧಿಗಳ ಮಾರಾಟದ ಮೇಲೆ ಕಠಿಣ ನಿಯಂತ್ರಣ ಜಾರಿಯಾಗಲಿದೆ.
ಹೊಸ ನಿಯಮದ ಪ್ರಕಾರ, ಕೆಮ್ಮಿನ ಸಿರಪ್ ಸೇರಿದಂತೆ ಯಾವುದೇ ರೀತಿಯ ಸಿರಪ್‌ಗಳನ್ನು ವೈದ್ಯರ ಶಿಫಾರಸು ಇಲ್ಲದೆ ಮೆಡಿಕಲ್ ಶಾಪ್‌ಗಳಿಂದ ಖರೀದಿಸಲು ಸಾಧ್ಯವಾಗುವುದಿಲ್ಲ. ಔಷಧ ಮಾರಾಟಗಾರರು ಕೂಡ ನೋಂದಾಯಿತ ವೈದ್ಯಕೀಯ ತಜ್ಞರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿರಪ್ ವಿತರಿಸದಂತೆ ಸೂಚಿಸಲಾಗಿದೆ.
ಇಲ್ಲಿಯವರೆಗೆ ಕೆಮ್ಮು, ಶೀತ, ಜ್ವರ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಬಳಸುವ ಅನೇಕ ಸಿರಪ್‌ಗಳನ್ನು ಸಾರ್ವಜನಿಕರು ವೈದ್ಯರನ್ನು ಸಂಪರ್ಕಿಸದೆ ನೇರವಾಗಿ ಔಷಧ ಅಂಗಡಿಗಳಿಂದ ಖರೀದಿಸುತ್ತಿದ್ದರು. ಆದರೆ ಹೊಸ ತಿದ್ದುಪಡಿ ಜಾರಿಯಾದ ಬಳಿಕ ಈ ಪದ್ಧತಿಗೆ ತೆರೆ ಬೀಳಲಿದೆ.
ಹೀಗಾಗಿ ಕೆಮ್ಮು, ಶೀತ, ಜ್ವರ ಅಥವಾ ಇತರ ಕಾಯಿಲೆಗಳ ಚಿಕಿತ್ಸೆಗೆ ಸಿರಪ್ ಆಧಾರಿತ ಔಷಧಿಗಳ ಅಗತ್ಯವಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ ಪ್ರಿಸ್ಕ್ರಿಪ್ಷನ್ ಪಡೆಯುವುದು ಕಡ್ಡಾಯವಾಗಲಿದೆ. ಈ ಕ್ರಮವು ಔಷಧಿಗಳ ಅನಗತ್ಯ ಬಳಕೆ ಹಾಗೂ ದುರುಪಯೋಗವನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.



