ದೊಡ್ಡಬಳ್ಳಾಪುರ: ಸಿಮೆಂಟ್ ಬಲ್ಕರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ನಡೆದಿದೆ.
ಮೃತರನ್ನು ಪವನ್ ಕುಮಾರ್ (22) ಮತ್ತು ಅಶೋಕ್ (24) ಎಂದು ಗುರುತಿಸಲಾಗಿದೆ. ಇಬ್ಬರೂ ಬೈಕ್‌ನಲ್ಲಿ ಬೆಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಸಿಮೆಂಟ್ ಬಲ್ಕರ್ ಲಾರಿ ಏಕಾಏಕಿ ರಸ್ತೆಯ ಮಧ್ಯೆ ನಿಲ್ಲಿಸಲಾಗಿದ್ದು, ಹಿಂಬದಿಯಿಂದ ಬಂದ ಬೈಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತದ ಬಳಿಕ ಲಾರಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೊಡ್ಡಬಳ್ಳಾಪುರ ಸರ್ಕಾರಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



