ಬೆಂಗಳೂರು: ಕರ್ನಾಟಕದ ಆಡಳಿತದಲ್ಲಿ ಕೇರಳ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಮಾತ್ರ ನಾನು ಮಾತನಾಡಿದ್ದೇನೆಯೇ ಹೊರತು ಕೇರಳಿಗರ ಬಗ್ಗೆ ಅಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೇಳಿಕೆಯನ್ನು ತಿರುಚಿ ಜನರ ದಾರಿ ತಪ್ಪಿಸುತ್ತಿರುವುದಾಗಿ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ ಅವರು, ಕೇರಳ ಜನರು ಹಾಗೂ ತಮ್ಮ ನಡುವೆ ಉತ್ತಮ ಬಾಂಧವ್ಯವಿದ್ದು ಪರಸ್ಪರ ಗೌರವವಿದೆ ಎಂದು ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಗೊಂದಲ ಸೃಷ್ಟಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ, ಇಂತಹ ಹುಳಿ ಹಿಂಡುವುದು ಬೇಡ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯದ ಅಭಿವೃದ್ಧಿ ಕುರಿತಾಗಿ ಮಾತನಾಡಿದ ಡಿಕೆಶಿ, ನೀರಾವರಿ ನಿಗಮಗಳ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸುಮಾರು 5 ಸಾವಿರ ಕೋಟಿ ರೂ. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದ್ದು, ಯುಕೆಪಿ ಯೋಜನೆಯ ಭೂಸ್ವಾಧೀನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. 2026ರ ಹೊಸ ವರ್ಷದಲ್ಲೂ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುವುದು, ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದು ಮತ್ತು ರೈತರ ಬದುಕು ಹಸನಾಗಿಸುವುದೇ ಕಾಂಗ್ರೆಸ್ ಸರ್ಕಾರದ ಗುರಿ ಎಂದು ಅವರು ಹೇಳಿದರು.



