ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ವಿರೋಧಿ ಕಾನೂನು ದ್ವೇಷ ಭಾಷಣ ತಡೆ ಮಸೂದೆ ಜಾರಿಗೆ ಹಿಂದೂ ಜನ ಜಾಗೃತಿ ವಿರೋಧವಿದ್ದು, ಇಂತಹ ಮಸೂದೆಗೆ ಅನುಮೋದನೆ ನೀಡಬಾರದು ಎಂದು ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಮನ್ವಯಕ ಗುರುಪ್ರಸಾದಗೌಡ ಹೇಳಿದರು.
ಅವರು ಮಂಗಳವಾರ ಹಿಂದೂ ಜನ ಜಾಗೃತಿ ಸಮಿತಿ, ಹಿಂದೂ ಪರ ಸಂಘಟನೆ ಮೂಲಕ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಧನಂಜಯ ಎಂ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ವಿಧೇಯಕ, 2025ಕ್ಕೆ ರಾಜ್ಯಪಾಲರು ಅನುಮೋದನೆ ನೀಡಬಾರದು. ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ವಿಧೇಯಕವು ಸ್ಪಷ್ಟತೆಯಿಲ್ಲದ ಹಾಗೂ ಸಂವಿಧಾನಕ್ಕೆ ವಿರುದ್ಧವಾದ ಕಾನೂನಾಗಿದೆ. ಜನರ ವಾಕ್ ಸ್ವಾತಂತ್ರ‍್ಯ ಮತ್ತು ಧಾರ್ಮಿಕ ಆಚರಣೆಗಳಿಗೆ ದೊಡ್ಡ ಅಪಾಯವಾಗುತ್ತದೆ. ವೇದ–ಶಾಸ್ತ್ರ ಉಲ್ಲೇಖ, ಧರ್ಮ ಪ್ರಚಾರ, ಧಾರ್ಮಿಕ ಚರ್ಚೆಗಳು ಮತ್ತು ಮತೀಯವಾದದ ಟೀಕೆಗಳಂತಹ ಸಾಮಾನ್ಯ ಧಾರ್ಮಿಕ ಚಟುವಟಿಕೆಗಳೇ ಸಮಸ್ಯೆಗೆ ಒಳಗಾಗುವ ಭೀತಿ ಇದೆ. ಸಾಮಾಜಿಕ ಬದಲಾವಣೆಗೆ ಶ್ರಮಿಸುವ ಸಾಧು-ಸಂತರ, ಪತ್ರಕರ್ತರ, ಸಮಾಜ ಸುಧಾರಕ-ಕಾರ್ಯಕರ್ತರ ಮೇಲೆ ವಿನಾಕಾರಣ ಕಿರುಕುಳ ಉಂಟಾಗುತ್ತದೆ. ಜನರ ವಾಕ್ ಸ್ವಾತಂತ್ರ‍್ಯ ಹಾಗೂ ಧಾರ್ಮಿಕ ಸ್ವಾತಂತ್ರ‍್ಯಕ್ಕೆ ಪೂರ್ಣ ರಕ್ಷಣೆ ಒದಗಿಸುವುದು ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯೊಂದಿಗೆ ಮರುಪರಿಶೀಲನೆ ನಡೆಸುವ ಉದ್ದೇಶದಿಂದ ಇದನ್ನು ವಿಧಾನಸಭೆಗೆ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ವಕೀಲರಾದ ಮಲ್ಲೇಶಪ್ಪ ಬಾಡಗಿ, ಎನ್.ಸಿ. ಬೆಲ್ಲದ, ರವಿಕಾಂತ ಅಂಗಡಿ, ಮಂಜುನಾಥ ಮಾಗಡಿ, ಶಂಕರ ಬ್ಯಾಡಗಿ, ಈರಣ್ಣ ಪೂಜಾರ, ಹೊನ್ನಪ್ಪ ವಡ್ಡರ, ಪ್ರವೀಣ ಯರ್ಲಗಟ್ಟಿ, ಅಮಿತ ಗುಡಗೇರಿ, ಬಸವರಾಜ ಮೆಣಸಿನಕಾಯಿ, ದಶರಥ ಕೋಟೆಗೌಡ್ರ, ಯಲ್ಲಪ್ಪ ಶಿರಬಡಗಿ, ಅಭಿಷೇಕ ಉಮಚಗಿ, ಅರುಣ ಕಳ್ಳಿಹಾಳ, ಪ್ರಕಾಶ ಗುತ್ತಲ, ಕೊಟ್ರೇಶ ಅಳವಂಡಿ, ಮಹಾದೇವಪ್ಪ ಕುಂದಗೋಳ, ಕಲ್ಯಾಣಿ ತಟ್ಟಿ, ಶೋಭಾ ಇಟಗಿ, ಬೇಬಿ ರುದ್ರಶೆಟ್ಟಿ ಮುಂತಾದವರು ಇದ್ದರು.



