ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಟಿಎಪಿಸಿಎಂಎಸ್‌ನ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಮೆಕ್ಕೆಜೋಳದ ಗುಣಮಟ್ಟ ಪರೀಕ್ಷೆಯ ನೆಪದಲ್ಲಿ ಅಲ್ಲಿನ ಸಿಬ್ಬಂದಿಗಳು ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಮಾಮೂಲು ಕೊಟ್ಟರೆ ಕ್ವಾಲಿಟಿ ಚೆನ್ನಾಗಿದೆ ಎಂದು, ಕೊಡದಿದ್ದರೆ ಕ್ವಾಲಿಟಿ ನೆಪದಲ್ಲಿ ಖರೀದಿ ತಿರಸ್ಕಾರ ಮಾಡುತ್ತಿದ್ದಾರೆ ಎಂದು ಸಮಗ್ರ ರೈತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಮಾಗಡಿ ಹಾಗೂ ರೈತ ಮುಖಂಡ ರವಿಕಾಂತ ಅಂಗಡಿ ಆರೋಪಿಸಿದರು.
ಅವರು ಮಂಗಳವಾರ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನೋಂದಣಿ ಮಾಡಿಕೊಂಡ ರೈತರ ಮೆಕ್ಕೆಜೋಳ ಖರೀದಿಯಾಗುತ್ತಿಲ್ಲ. ಸರದಿ ಸಾಲಿನಲ್ಲಿ 8-10 ದಿನ ನಿಂತರೆ ನಿತ್ಯ ಸಾವಿರ ರೂ ಟ್ರ್ಯಾಕ್ಟರ್ ಬಾಡಿಗೆ ಕೊಡಬೇಕು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹೆಸರ ಮೇಲೆ ದುಡ್ಡು ಮಾಡುತ್ತಿದ್ದಾರೆ. ರೈತರಿಗೆ ಉತ್ತಮ ಬೆಲೆ ಸಿಗಬೇಕು ಎಂದು ಹೋರಾಟ ಮಾಡಿದರೆ ಅದರ ಲಾಭ ಬಂಡವಾಳಶಾಹಿಗಳಿಗೆ ಸಿಗುತ್ತಿದೆ. ಖರೀದಿ ಕೇಂದ್ರದಲ್ಲಿ ಯಾರೂ ಕೇಳುವವರೇ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ನಾಗರಾಜ ಚಿಂಚಲಿ ಮಾತನಾಡಿ, ಸೊಸೈಟಿ ಮುಂದೆ ಇಟ್ಟುಕೊಂಡು ರೈತರ ಬಳಿ ಸುಲಿಗೆ ಮಾಡುತ್ತಿದ್ದಾರೆ. 8-10 ದಿನದಿಂದ ಮೆಕ್ಕೆಜೋಳ ತಂದು ಪಾಳಿಯಲ್ಲಿ ನಿಂತರೂ ಇಲ್ಲದ ಕಾರಣ ಹೇಳಿ ಮೆಕ್ಕೆಜೋಳ ತಿರಸ್ಕಾರ ಮಾಡುತ್ತಿದ್ದಾರೆ. ಸರ್ಕಾರದ ಸ್ಪಷ್ಟ ಆದೇಶದ ನಡುವೆಯೂ ರೈತರಿಗೆ ಅನ್ಯಾಯವಾಗುತ್ತಿದ್ದು, ಅದನ್ನು ಸರಿಪಡಿಸಬೇಕು ಎಂದು ಹೇಳಿದರು.
ಈ ವೇಳೆ ಪೂರ್ಣಾಜಿ ಖರಾಟೆ, ಬಸವರಾಜ ಹಿರೇಮನಿ, ಟಾಕಪ್ಪ ಸಾತಪುತೆ, ಪ್ರಕಾಶ ಗುತ್ತಲ, ಮಂಜುನಾಥ ಮುಳುಗುಂದ, ಫಕ್ಕೀರಯ್ಯ ಹಿರೇಮಠ ಮುಂತಾದವರು ಇದ್ದರು.



