ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ದೇವರು ಸಮೃದ್ಧಿಯಾಗುವ ಸಮಯದಲ್ಲಿ ಭಕ್ತರು ಸ್ಮಶಾನದ ಕಡೆಗೆ ಸಾಗುವಂತಾಗಿದೆ. ಇಲ್ಲಿನ ಕಾರ್ಖಾನೆಗಳ ಕೊಳವೆಗಳು ಫಿರಂಗಿಗಳಂತೆ ಪರಿಣಮಿಸಿವೆ ಎಂದು ಹಿರಿಯ ಚಿಂತಕ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಗಳ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿಯ 61ನೇ ದಿನದ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು.
ತುಂಗಭದ್ರ ನದಿ ಇಂದು ಚರಂಡಿಯಾಗಿ ಪರಿವರ್ತನೆಯಾಗುತ್ತಿದ್ದು, ಇಲ್ಲಿಂದ ಜಿಂದಾಲ್‌ವರೆಗೆ ಸುಮಾರು 70 ಕಿ.ಮೀ ವ್ಯಾಪ್ತಿಯು ಅಪಾಯಕಾರಿ ಮಾಲಿನ್ಯದ ಕಾರಿಡಾರ್ ಆಗಿದೆ. ಸರಕಾರಗಳೇ ಜನರ ಮೇಲೆ ಯುದ್ಧ ಸಾರಿದಂತಾಗಿದೆ ಇಲ್ಲಿನ ಪರಿಸ್ಥಿತಿ. ಆದ್ದರಿಂದ ಇದು ಎಲ್ಲರ ಹೋರಾಟವಾಗಬೇಕು. ಕೊಪ್ಪಳದ ಗವಿಮಠದ ಜಾತ್ರೆಯೂ ಜನಪರವಾಗಿ ನಿಲ್ಲಬೇಕು. ಇಲ್ಲಿನ ದೂಳು, ಹೊಗೆ ಹಾಗೂ ವಿಷಾನಿಲದ ವಿರುದ್ಧದ ಹೋರಾಟ ಇದಾಗಿದೆ. ಕಾರ್ಖಾನೆಗಳ ಕೊಳವೆಗಳು ಇಲ್ಲಿನ ಜನರನ್ನು ಕೊಲ್ಲುವ ಫಿರಂಗಿಗಳಂತೆ ಕಾಣುತ್ತಿದ್ದು, ಇದು ಬದುಕಿನ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ಹೇಳಿದರು.
ಯುವ ರೈತ ಗವಿಸಿದ್ದಪ್ಪ ಪುಟಗಿ ಮಾತನಾಡಿ, ಈಗಾಗಲೇ ಕೃಷಿ ಇಲಾಖೆ ಇಲ್ಲಿ ಬೆಳೆ ಬೆಳೆಯಬೇಡಿ ಎನ್ನುತ್ತಿದೆ. ತೋಟಗಾರಿಕೆ ಸಂಪೂರ್ಣವಾಗಿ ನಿಂತುಹೋಗಿದೆ. ಪಶುಸಂಗೋಪನಾ ಇಲಾಖೆ ದನ-ಕರುಗಳನ್ನು ಸಾಕಬೇಡಿ ಎಂದು ಸೂಚಿಸುತ್ತಿದೆ. ಇಲಾಖೆಗಳು ಈ ಪ್ರದೇಶವನ್ನು ಬಫರ್‌ಜೋನ್ ಎಂದು ಹೇಳುತ್ತಿದ್ದರೂ ಅಲ್ಲಿ ಗಿಡವೂ ಬೆಳೆಯದ ಸ್ಥಿತಿ ಇದೆ. ಅನೇಕ ಅಧಿಕಾರಿಗಳು ಕಾರ್ಖಾನೆಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಮಾತ್ರವೇ ಇಲ್ಲಿ ಕ್ಯಾನ್ಸರ್‌ನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಆದರೆ ಅಧ್ಯಯನ ನಡೆಸುವ ಸಂಸ್ಥೆಗಳು ಮತ್ತು ಸಮಿತಿಗಳು ಕೇವಲ ಕಾರ್ಖಾನೆ ಪರವಾಗಿ ಸೂಟ್‌ಕೇಸ್‌ಗಳಿಗೆ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಜಂಟಿ ಕ್ರಿಯಾ ವೇದಿಕೆಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕಾರ್ಖಾನೆ ವಿರೋಧಿ ಈ ಹೋರಾಟದ ವೇದಿಕೆಯಲ್ಲಿ ಸಾಹಿತ್ಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾಲ್ವರು ದಿಗ್ಗಜರಾದ ಹೆಚ್.ಎಸ್. ಪಾಟೀಲ್, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಎ.ಎಂ. ಮದರಿ ಹಾಗೂ ಚಿಂತಕ ರಹಮತ್ ತರೀಕೆರೆ ಉಪಸ್ಥಿತರಿರುವುದು ಈ ಹೋರಾಟದ ಗಂಭೀರತೆಯನ್ನು ತೋರಿಸುತ್ತದೆ. ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಧರಣಿಯಲ್ಲಿ ಪುಷ್ಪಲತಾ ಏಳುಭಾವಿ, ಬಿ.ಜಿ. ಕರಿಗಾರ, ಸಾವಿತ್ರಿ ಮುಜುಮದಾರ್, ಸಿ.ವಿ. ಜಡಿಯವರ, ಎಸ್.ಬಿ. ರಾಜೂರು, ಗಂಗಾಧರ ಖಾನಾಪೂರ, ರವಿ ಕಾಂತನವರ, ಕವಿ ಮಹೇಶ ಮನ್ನಾಪುರ, ಎಂ.ಡಿ. ಪಾಟೀಲ್, ಶಂಭುಲಿಂಗಪ್ಪ ಆರ್. ಹರಗೇರಿ, ಮಂಜುನಾಥ ಆಟೋ, ಮಂಜುನಾಥ ಕೊಂಡನಹಳ್ಳಿ, ಶಾಂತಯ್ಯ ಅಂಗಡಿ, ಯಲ್ಲಪ್ಪ ಕೋಳೂರು, ಎಸ್. ಮಹಾದೇವಪ್ಪ ಮಾವಿನಮಡು, ಈರಯ್ಯಸ್ವಾಮಿ ಸಾಲಿಮಠ, ಗೀತಾ ಭೋವಿ, ಸದಾಶಿವ ಪಾಟೀಲ್, ರಮೇಶ ಡಂಬ್ರಳ್ಳಿ ಕುಣಿಕೇರಿ, ರಮೇಶ ಕೋಳೂರು, ಶಿವಪ್ಪ ಜಲ್ಲಿ, ಬಸವರಾಜ ನರೇಗಲ್, ಪಾಮಣ್ಣ ಕೆ. ಮಲ್ಲಾಪುರ, ಮಖ್ಬುಲ್ ರಾಯಚೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬೆಳಿಗ್ಗೆ ಖ್ಯಾತ ವಿಮರ್ಶಕ ಹಾಗೂ ಸಂಶೋಧಕ ರಹಮತ್ ತರೀಕೆರೆ ಅವರು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪುಸ್ತಕ ಪ್ರಕಾಶಕ ಡಿ.ಎಂ. ಬಡಿಗೇರ, ಮಾಲಾ ಬಡಿಗೇರ ಅವರೊಂದಿಗೆ ಕಾರ್ಖಾನೆಗಳಿಂದ ಬಾಧಿತವಾಗಿರುವ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ಕುಣಿಕೇರಿ ತಾಂಡಾ ಹಾಗೂ ಹಾಲವರ್ತಿ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ವೀಕ್ಷಿಸಿದರು.



