ಚಿಕ್ಕಬಳ್ಳಾಪುರ: ಹೆಣ್ಣು ಮಗು ಜನಿಸಿದ್ದಕ್ಕೆ ಕೇವಲ 13 ದಿನಗಳ ಸ್ವಂತ ಮಗುವನ್ನೇ ಸಂಪ್‌ಗೆ ಎಸೆದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ಇಮ್ರಾನ್‌ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಇಮ್ರಾನ್ ಮತ್ತು ಮುಸ್ಕಾನ್ ದಂಪತಿಗೆ 13 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಬುಧವಾರ ರಾತ್ರಿ ಮಲಗಿದ್ದ ಮಗುವನ್ನು ಇಮ್ರಾನ್ ಮನೆಯ ಸಂಪ್‌ಗೆ ಎಸೆದಿದ್ದಾನೆ ಎನ್ನಲಾಗಿದೆ.
ಸ್ವಲ್ಪ ಸಮಯದ ಬಳಿಕ ಎದ್ದ ತಾಯಿ ಮುಸ್ಕಾನ್, ಮಗು ಕಾಣಿಸದ ಹಿನ್ನೆಲೆಯಲ್ಲಿ ಪತಿಯನ್ನು ಪ್ರಶ್ನಿಸಿದಾಗ, “ನನಗೆ ಗೊತ್ತಿಲ್ಲ” ಎಂದು ಉತ್ತರಿಸಿದ್ದಾನೆ. ಬಳಿಕ ಕುಟುಂಬದವರೊಂದಿಗೆ ಸೇರಿ ಮಗು ಹುಡುಕುತ್ತಿರುವಂತೆ ನಾಟಕವನ್ನೂ ಆಡಿದ್ದಾನೆ ಎಂದು ತಿಳಿದುಬಂದಿದೆ.
ಕುಟುಂಬದವರಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಮನೆಯ ಸಂಪ್‌ನಲ್ಲಿದ್ದ ನೀರನ್ನು ಹೊರಹಾಕಿ ಪರಿಶೀಲಿಸಿದಾಗ, 13 ದಿನಗಳ ಕಂದಮ್ಮನ ಮೃತದೇಹ ಪತ್ತೆಯಾಗಿದೆ. ಈ ಘಟನೆ ಕುಟುಂಬದವರನ್ನು ಶೋಕಸಾಗರಕ್ಕೆ ತಳ್ಳಿದೆ.
ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಇಮ್ರಾನ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಗುವಿನ ಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.



