ಬೆಂಗಳೂರು: ಹಿಂದೂ ವಿವಾಹವು ಕೇವಲ ಒಪ್ಪಂದವಲ್ಲ, ಅದು ಜೀವಿತಾವಧಿಯ ಪವಿತ್ರ ಸಂಸ್ಕಾರವಾಗಿದೆ. ದಾಂಪತ್ಯ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬ ಕಾರಣವೊಂದನ್ನೇ ಆಧಾರ ಮಾಡಿಕೊಂಡು ಸಂಗಾತಿಯನ್ನು ತೊರೆಯಲು ಅಥವಾ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪತ್ನಿಯಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಪತಿಯ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠ, ಮೈಸೂರು ಕುಟುಂಬ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಏನಿದು ಪ್ರಕರಣ?
2003ರ ಡಿಸೆಂಬರ್ 15ರಂದು ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ದಂಪತಿ ಸುಮಾರು 21 ವರ್ಷಗಳ ಬಳಿಕ ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ದಂಪತಿಗೆ ಈಗ ಬಹುತೇಕ ಪ್ರಾಪ್ತವಯಸ್ಕಳಾಗಿರುವ ಮಗಳಿದ್ದಾರೆ.
ಮೊದಲಿಗೆ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, ಪತ್ನಿ ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 9ರ ಅಡಿಯಲ್ಲಿ ದಾಂಪತ್ಯ ಜೀವನ ಮರುಸ್ಥಾಪನೆಗೆ (Restitution of Conjugal Rights) ಅರ್ಜಿ ಸಲ್ಲಿಸಿದ್ದರು.
ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿದ ಮೈಸೂರು ಕುಟುಂಬ ನ್ಯಾಯಾಲಯ, ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿ, ಪತ್ನಿಯ ಅರ್ಜಿಯನ್ನು ಅಂಗೀಕರಿಸಿತ್ತು.
ಮತ್ತೆ ವಿಚ್ಛೇದನಕ್ಕೆ ಅರ್ಜಿ
ನಂತರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1A) ಅಡಿಯಲ್ಲಿ, ಮರುಸ್ಥಾಪನೆ ಆದೇಶದ ಬಳಿಕವೂ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಸಹಜೀವನ ಪುನರಾರಂಭವಾಗಿಲ್ಲ ಎಂಬ ಕಾರಣ ನೀಡಿ ಪತಿ ಮತ್ತೊಮ್ಮೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ಪತ್ನಿಯನ್ನು ಹಲವು ಬಾರಿ ಮನೆಗೆ ಬರಲು ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ವೈವಾಹಿಕ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಪತಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಪತ್ನಿಯ ವಾದವೇನು?
ಪತ್ನಿ ಪರವಾಗಿ, ತಾನು ಪತಿ ಹಾಗೂ ಅತ್ತೆ-ಮಾವರನ್ನು ಪ್ರೀತಿ ಮತ್ತು ಗೌರವದಿಂದ ನೋಡಿಕೊಂಡಿದ್ದೇನೆ ಎಂದು ತಿಳಿಸಲಾಯಿತು. ತಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಾರಣ ಮನೆಯ ಸಂಪ್ರದಾಯಗಳನ್ನು ಪಾಲಿಸಿ ಮೊದಲ ಮಹಡಿಯಲ್ಲಿ ಪೂಜೆ ಹಾಗೂ ಅಡುಗೆ ಮಾಡುವಂತೆ ಪತಿಯ ಪೋಷಕರು ಸೂಚಿಸಿದ್ದನ್ನು ಅನುಸರಿಸಿದ್ದೇನೆ. ಪ್ರತ್ಯೇಕ ಮನೆಗಾಗಿ ಎಂದಿಗೂ ಒತ್ತಾಯಿಸಿಲ್ಲ. ಪತಿ ಅಥವಾ ಅವರ ಕುಟುಂಬದವರೊಂದಿಗೆ ಯಾವುದೇ ಜಗಳವಾಡಿಲ್ಲ ಎಂದು ಪತ್ನಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹೈಕೋರ್ಟ್ ಹೇಳಿದ್ದೇನು?
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಕುಟುಂಬ ನ್ಯಾಯಾಲಯದಲ್ಲಿ ಪತ್ನಿಯ ವಿರುದ್ಧ ಪತಿ ಮಾಡಿದ್ದ ಕ್ರೌರ್ಯದ ಆರೋಪಗಳು ಸಾಬೀತಾಗಿಲ್ಲ ಎಂದು ಗಮನಿಸಿದೆ.
ಇದಲ್ಲದೆ, ವಿಚಾರಣೆ ವೇಳೆ ಪತಿಯೇ “ದಾಂಪತ್ಯ ಜೀವನ ಮುಂದುವರಿಸುವ ಆಸಕ್ತಿ ಇಲ್ಲದ ಕಾರಣ ಸಹಜೀವನ ಪುನರಾರಂಭ ಮಾಡಿಲ್ಲ” ಎಂದು ಒಪ್ಪಿಕೊಂಡಿರುವುದನ್ನೂ ನ್ಯಾಯಪೀಠ ಉಲ್ಲೇಖಿಸಿದೆ.
“ಹಿಂದೂ ವಿವಾಹವು ಕೇವಲ ಒಪ್ಪಂದವಲ್ಲ; ಅದು ಪವಿತ್ರ ಸಂಸ್ಕಾರವಾಗಿದೆ. ದಾಂಪತ್ಯ ಜೀವನದಲ್ಲಿ ಆಸಕ್ತಿ ಇಲ್ಲ ಎಂಬ ಕಾರಣವೊಂದನ್ನೇ ಆಧಾರ ಮಾಡಿಕೊಂಡು ವಿವಾಹ ಬಂಧನದಿಂದ ಹೊರಬರಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದೆ.



