ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಸದ್ಯ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಕುರಿತ ಕುತೂಹಲ ಹೆಚ್ಚಿಸಲು ಚಿತ್ರತಂಡ ಪಾತ್ರಗಳ ಪರಿಚಯವನ್ನು ಹಂತ ಹಂತವಾಗಿ ಮಾಡುತ್ತಿದೆ. ಈಗಾಗಲೇ ಕಿಯಾರಾ ಅಡ್ವಾಣಿ ಹಾಗೂ ಹುಮಾ ಖುರೇಷಿ ಪಾತ್ರಗಳು ರಿವೀಲ್ ಆಗಿದ್ದು, ಇದೀಗ ನಟಿ ನಯನತಾರಾ ಅವರ ಪಾತ್ರದ ಅನಾವರಣ ನಡೆದಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ ಅವರು ಗಂಗಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ಹಲವು ದಿನಗಳ ಕಾಲ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಪಾತ್ರ ರಿವೀಲ್ ಆದ ಬಳಿಕ ಅವರ ಲುಕ್‌ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅರಮನೆಯ ಶೈಲಿಯ ಸೆಟ್, ಹಿಂಭಾಗದಲ್ಲಿ ನಿಂತಿರುವ ವಿದೇಶಿ ಗಾರ್ಡ್ಗಳು ಮತ್ತು ಕೈಯಲ್ಲಿ ಶಾಟ್ ಗನ್ ಹಿಡಿದ ನಯನತಾರಾ – ಈ ದೃಶ್ಯಗಳು ಅವರ ಪಾತ್ರದಲ್ಲಿ ಆ್ಯಕ್ಷನ್ ಹಾಗೂ ಮಾಸ್ ಎಲಿಮೆಂಟ್ಸ್ ಹೆಚ್ಚಾಗಿ ಇರಲಿವೆ ಎಂಬುದಕ್ಕೆ ಸುಳಿವು ನೀಡುತ್ತಿವೆ. ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
ಜನವರಿ 8ರಂದು ನಟ ಯಶ್ ಅವರ ಜನ್ಮದಿನ ಇರುವ ಹಿನ್ನೆಲೆಯಲ್ಲಿ, ಆ ದಿನ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅದಕ್ಕೂ ಮುನ್ನ ಎಲ್ಲಾ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಮೂಲಕ ಸಿನಿಮಾದ ಹೈಪ್ ಹೆಚ್ಚಿಸುವ ತಂತ್ರವನ್ನು ಚಿತ್ರತಂಡ ಅನುಸರಿಸುತ್ತಿದೆ.
ಮಲಯಾಳಂನ ಗೀತು ಮೋಹನ್ದಾಸ್ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದು, ಕಥೆ ಬರವಣಿಗೆಯಲ್ಲಿ ಯಶ್ ಅವರ ಪಾತ್ರವೂ ಇದೆ. ಪೋಸ್ಟರ್‌ನಲ್ಲಿ ತಿಳಿಸಿರುವಂತೆ ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ. ಶೂಟಿಂಗ್ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ ಇದೆ.
ಮಾರ್ಚ್ 19ರಂದು ಈದ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಹಿಂದಿಯಲ್ಲಿ ‘ಧುರಂಧರ್ 2’ ಸಿನಿಮಾ ತೆರೆಗೆ ಬರುತ್ತಿದೆ. ಈ ಕಾರಣದಿಂದ ‘ಟಾಕ್ಸಿಕ್’ಗೆ ದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಶ್ ಎದುರಾಗುವ ಸಾಧ್ಯತೆ ಇದೆ.



