ಹೊಸ ವರ್ಷಾಚರಣೆಗೆಂದು ಆಯೋಜಿಸಲಾಗಿದ್ದ ನಟಿ ಸನ್ನಿ ಲಿಯೋನಿ ಅವರ ಲೈವ್ ಶೋ ಇದೀಗ ವಿವಾದದ ಕಾರಣಕ್ಕೆ ರದ್ದಾಗಿದೆ. ನೀಲಿ ಚಿತ್ರರಂಗದಿಂದ ಹೊರಬಂದಿದ್ದರೂ, ಸನ್ನಿ ಲಿಯೋನಿ ಇನ್ನೂ ಸಹ ತಮ್ಮ ಹಳೆಯ ಇಮೇಜ್‌ನಿಂದಾಗಿ ಟೀಕೆ ಮತ್ತು ವಿರೋಧಗಳನ್ನು ಎದುರಿಸುತ್ತಿದ್ದಾರೆ.
ಮಥುರಾದ ಖಾಸಗಿ ಐಷಾರಾಮಿ ಹೋಟೆಲ್‌ನಲ್ಲಿ ಡಿಜಿ ಪಾರ್ಟಿಯೊಂದಿಗೆ ಹೊಸ ವರ್ಷಾಚರಣೆ ಆಯೋಜಿಸಲಾಗಿದ್ದು, ಸನ್ನಿ ಲಿಯೋನಿ ವಿಶೇಷ ಅತಿಥಿಯಾಗಿ ಭಾಗವಹಿಸಬೇಕಿತ್ತು. ಜೊತೆಗೆ ಗ್ಲಾಮರಸ್ ನೃತ್ಯ ಪ್ರದರ್ಶನವೂ ನಡೆಯಬೇಕಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಹೋಟೆಲ್ ಆಡಳಿತವು ಪೊಲೀಸರ ಹಾಗೂ ಸ್ಥಳೀಯ ಆಡಳಿತದ ಅನುಮತಿಯನ್ನು ಪಡೆದುಕೊಂಡಿತ್ತು.
ಆದರೆ ಸನ್ನಿ ಲಿಯೋನಿ ಆಗಮಿಸುವ ಸುದ್ದಿ ಹೊರಬಂದ ಬೆನ್ನಲ್ಲೇ ಸಂಪ್ರದಾಯವಾದಿ ಮತ್ತು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. ಕೃಷ್ಣನ ಜನ್ಮಭೂಮಿ ಮಥುರಾದಲ್ಲಿ ಇಂತಹ ಕಾರ್ಯಕ್ರಮ ಸರಿಯಲ್ಲ ಎಂದು ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುವ ಹಾಗೂ ಹೋಟೆಲ್‌ಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ನೀಡಿದವು.
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಹೋಟೆಲ್ ಆಡಳಿತವು ಕಾರ್ಯಕ್ರಮವನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿತು.
“ಕಾರ್ಯಕ್ರಮವನ್ನು ಕಾನೂನುಬದ್ಧವಾಗಿ ನಡೆಸಲು ಎಲ್ಲಾ ಅನುಮತಿಗಳನ್ನು ಪಡೆದಿದ್ದರೂ, ಸಾಮಾಜಿಕ ಹಾಗೂ ಧಾರ್ಮಿಕ ಭಾವನೆಗಳನ್ನು ಗೌರವಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಹೋಟೆಲ್ ಆಡಳಿತ ತಿಳಿಸಿದೆ.
ಸನ್ನಿ ಲಿಯೋನಿ, ನೀಲಿ ಚಿತ್ರರಂಗಕ್ಕೆ ವಿದಾಯ ಹೇಳಿದ ಬಳಿಕವೂ ಗ್ಲಾಮರ್ ಕ್ವೀನ್, ಪಾರ್ಟಿ ಗರ್ಲ್ ಎಂಬ ಇಮೇಜ್‌ನಿಂದಾಗಿ ಇಂತಹ ಕಾರ್ಯಕ್ರಮಗಳಿಗೆ ಆಹ್ವಾನ ಪಡೆಯುತ್ತಲೇ ಇದ್ದಾರೆ. ಆದರೆ ಇದೇ ಕಾರಣಕ್ಕೆ ಹಲವಾರು ಬಾರಿ ಅವರ ಕಾರ್ಯಕ್ರಮಗಳು ವಿರೋಧ, ಪ್ರತಿಭಟನೆ ಹಾಗೂ ಒತ್ತಡದಿಂದ ರದ್ದಾಗುತ್ತಿರುವುದು ಇದು ಮೊದಲಲ್ಲ.



