ಬೆಂಗಳೂರು: ರಾಜ್ಯದ ಸಿನಿಮಾ ಪ್ರೇಕ್ಷಕರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಸಿನಿಮಾ ಟಿಕೆಟ್‌ಗಳ ಮೇಲೆ ಶೇ. 2ರಷ್ಟು ಹೆಚ್ಚುವರಿ ಸೆಸ್ (ಉಪಕರ) ವಿಧಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹೊಸ ನಿಯಮವು ಸೆಪ್ಟೆಂಬರ್ 30 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
2024ರ ವಿಧೇಯಕಕ್ಕೆ ಕೊನೆಗೂ ಚಾಲನೆ: ರಾಜ್ಯ ಸರ್ಕಾರವು 2024 ರಲ್ಲಿ ಮಂಡಿಸಿದ್ದ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ’ಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಈ ಮಸೂದೆಗೆ 2024ರ ಸೆಪ್ಟೆಂಬರ್ 23 ರಂದು ಕರ್ನಾಟಕದ ರಾಜ್ಯಪಾಲರು ಅಧಿಕೃತವಾಗಿ ಅಂಕಿತ ಹಾಕಿದ್ದರು. ಅದರ ಮರುದಿನವೇ, ಅಂದರೆ ಸೆಪ್ಟೆಂಬರ್ 24 ರಂದು ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ (Gazette) ಇದನ್ನು ಪ್ರಕಟಿಸಲಾಗಿತ್ತು. ಇದೀಗ ಸುದೀರ್ಘ ಪ್ರಕ್ರಿಯೆಯ ಬಳಿಕ ಈ ಅಧಿನಿಯಮವನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುತ್ತಿದೆ.
ಟಿಕೆಟ್ ದರ ಎಷ್ಟು ಹೆಚ್ಚಾಗಲಿದೆ?: ಹೊಸ ನಿಯಮದ ಪ್ರಕಾರ, ಮಲ್ಟಿಪ್ಲೆಕ್ಸ್ ಸೇರಿದಂತೆ ಸಿನಿಮಾ ಮಂದಿರಗಳಲ್ಲಿ ಸಿನಿಮಾ ನೋಡುವ ಗ್ರಾಹಕರು ಟಿಕೆಟ್ ದರದ ಜೊತೆಗೆ 2% ಹೆಚ್ಚುವರಿ ಸೆಸ್ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ₹200 ಮುಖಬೆಲೆಯ ಟಿಕೆಟ್‌ಗೆ ಹೆಚ್ಚುವರಿಯಾಗಿ ₹4 ಸೆಸ್ ಪಾವತಿಸಬೇಕಾಗುತ್ತದೆ.
ಸಿನಿಮಾ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ನಿಧಿ ಬಳಕೆ: ಸಿನಿಮಾ ಟಿಕೆಟ್ ಮೂಲಕ ಸಂಗ್ರಹವಾಗುವ ಈ ಸೆಸ್ ಹಣವನ್ನು ಕೇವಲ ಸಿನಿಮಾ ರಂಗದ ಕಾರ್ಮಿಕರ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳಿಗಾಗಿ ಮಾತ್ರ ಬಳಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.



