ವಿಜಯಸಾಕ್ಷಿ ಸುದ್ದಿ, ಧಾರವಾಡ: ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ಜರುಗಿರುವ ಘಟನೆಗೆ ಸಂಬಂಧಿಸಿದಂತೆ ಅಂತರ್ಜಾತಿ ವಿವಾಹವಾಗಿದ್ದ ಯುವತಿಯ ಹತ್ಯೆ ಮತ್ತು ದಲಿತ ಕುಟುಂಬದ ಮೇಲೆ ಆಗಿರುವ ದೌರ್ಜನ್ಯದ ಕುರಿತು ಪಾರದರ್ಶಕ ತನಿಖೆ ಕೈಗೊಂಡು ತ್ವರಿತವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಇಂತಹ ದುರ್ಘಟನೆಗಳು ಜರುಗದಂತೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಅಗತ್ಯವಿದ್ದರೆ, ಮುಂಬರುವ ಅಧಿವೇಶನದಲ್ಲಿ ವಿಶೇಷ ಕಾನೂನು ರಚನೆಗೆ ಕ್ರಮವಹಿಸಲಾಗುವುದು. ಈ ಕುರಿತು ಜಿಲ್ಲಾಡಳಿತ ವರದಿ ಸಲ್ಲಿಸಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹೇಳಿದರು.
ಅವರು ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.
ಆಧುನಿಕ ಸಮಾಜದಲ್ಲಿ ಇಂತಹ ಅಮಾನವೀಯ ಘಟನೆ ಜರುಗಬಾರದಿತ್ತು. ಜಿಲ್ಲೆಯಲ್ಲಿ ಜರುಗಿರುವ ಅಂತರ್ಜಾತಿ ವಿವಾಹಗಳ ಕುರಿತು ಮಾಹಿತಿ ಪಡೆಯಬೇಕು. ಸಂಬಂಧಿಸಿದ ಇಲಾಖೆಗಳ ಸಮನ್ವಯ ಸಾಧಿಸಿ, ಜನರಿಗೆ ತಿಳುವಳಿಕೆ ಮತ್ತು ಮನವರಿಕೆ ಮಾಡಿ, ಸಂವಿಧಾನದ ಆಶಯಗಳನ್ನು ತಿಳಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇಶದ ಕಾನೂನಿನ ಪ್ರಕಾರ ವಯಸ್ಸಿಗೆ ಬಂದ ಯುವಕ-ಯುವತಿಯರು ತಮ್ಮಿಷ್ಟದ ಸಂಗಾತಿಯನ್ನು ಮದುವೆಯಾಗಲು ಯಾವುದೇ ನಿರ್ಬಂಧಗಳಿಲ್ಲ ಎಂದು ಹೇಳಿದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಅಬ್ಬಯ್ಯ ಪ್ರಸಾದ್ ಮಾತನಾಡಿ, ಇನಾಂವೀರಾಪೂರ ಗ್ರಾಮದ ಘಟನೆ ಹಿನ್ನೆಲೆಯಲ್ಲಿ, ಇತರ ಸ್ಥಳಗಳಲ್ಲಿ ಇರುವ ಅಂತರ್ಜಾತಿ ವಿವಾಹವಾಗಿರುವ ಕುಟುಂಬಗಳಿಗೆ ಅಗತ್ಯ ಭದ್ರತೆ ಹಾಗೂ ಭರವಸೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸಬೇಕು. ದೊಡಮನಿ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಹೇಳಿದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಇನಾಂವೀರಾಪೂರ ಗ್ರಾಮದ ಘಟನೆ ಧಾರವಾಡ ಜಿಲ್ಲೆಯಲ್ಲಿ ಆಗಿರುವುದು ವಿಷಾದನೀಯ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಘಟನೆ ಜರುಗಿದ ದಿನದಿಂದ ಪೊಲೀಸ್, ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಗತ್ಯ ಕ್ರಮವಹಿಸಿವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಜರುಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಿ. ರಣದೀಪ್ ಮತ್ತು ಆಯುಕ್ತ ಡಾ. ರಾಕೇಶಕುಮಾರ ಅವರು ಪ್ರಕರಣದ ತನಿಖೆ ಮತ್ತು ಸರ್ಕಾರದ ಕಾಯ್ದೆ, ಕಾನೂನುಗಳ ಬಗ್ಗೆ ವಿವರಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಇನಾಂವೀರಾಪೂರ ಗ್ರಾಮದ ಪ್ರಕರಣದಲ್ಲಿ ಎಲ್ಲ ಇಲಾಖೆಗಳು ಸೂಕ್ತ ಕ್ರಮ ವಹಿಸಿವೆ. ಜಿಲ್ಲಾಡಳಿತ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ನಿಯಮಾನುಸಾರ ಪರಿಹಾರ ಹಾಗೂ ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲಾಗಿದ್ದು, ಅವರಿಗೆ ಅವಶ್ಯಕ ಗೃಹೋಪಯೋಗಿ ಸಾಮಗ್ರಿಗಳನ್ನು ತಲುಪಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ಇ) ಬೆಳಗಾವಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿವೈಎಸ್ಪಿ ವಿನೋದ ಮುಕ್ತೆದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್.ಕುಕನೂರ, ಪ್ರಶಾಂತ ಸಿದ್ದನಗೌಡರ ಸೇರಿದಂತೆ ಅವಳಿ ನಗರದ ಎಲ್ಲ ಸಹಾಯಕ ಪೊಲೀಸ್ ಆಯುಕ್ತರು, ಪೊಲೀಸ್ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಎಲ್ಲ ತಾಲೂಕಿನ ತಹಸೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ಘಟನೆ ಜರುಗಿದ ತಕ್ಷಣ ಪೊಲೀಸ್ ಇಲಾಖೆ ಕ್ರಮವಹಿಸಿ, ವಿವೇಕಾನಂದ ದೊಡಮನಿ ಕುಟುಂಬವನ್ನು ರಕ್ಷಿಸಿ, ಅಗತ್ಯ ಚಿಕಿತ್ಸೆ ನೀಡಲು ಕ್ರಮ ವಹಿಸಿದೆ. ಯುವತಿಯನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ದೂರಿನಲ್ಲಿರುವ ಇತರ ಆರೋಪಿಗಳ ಬಂಧನಕ್ಕೂ ಕ್ರಮವಹಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಆರೋಪ ಪಟ್ಟಿ (ಚಾರ್ಜ್ ಶೀಟ್) ತಯಾರಿಸಲಾಗುವುದು ಎಂದು ಹೇಳಿದರು.
ಇನಾಂವೀರಾಪೂರ ಪ್ರಕರಣದ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ, ಭದ್ರತೆ, ಪರಿಹಾರ ಕುರಿತು ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬದವರು ಪ್ರಕರಣದ ಕುರಿತು ತ್ವರಿತ ತನಿಖೆ, ಪುನರ್ವಸತಿ ಸೌಲಭ್ಯ, ಉದ್ಯೋಗ ಮತ್ತು ಭದ್ರತೆಯನ್ನು ಕೇಳಿದ್ದಾರೆ. ಈ ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ಹಂತದಲ್ಲಿ ಚರ್ಚಿಸಿ, ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು.
ಡಾ. ಹೆಚ್.ಸಿ. ಮಹದೇವಪ್ಪ.
ಸಮಾಜ ಕಲ್ಯಾಣ ಇಲಾಖೆ ಸಚಿವರು.



