ತುಮಕೂರು: ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಸಂಭವಿಸಿರುವ ಘಟನೆ ಅರಣ್ಯ ಇಲಾಖೆ ಹಾಗೂ ಪರಿಸರ ಪ್ರೇಮಿಗಳಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ದೇವರಾಯನದುರ್ಗ ಮತ್ತು ದುರ್ಗದ ಹಳ್ಳಿ ನಡುವಿನ ಅರಣ್ಯ ಭಾಗದಲ್ಲಿ ಕೇವಲ ಎರಡು ದಿನಗಳಲ್ಲಿ 11 ಕೋತಿಗಳ ಮೃತದೇಹ ಪತ್ತೆಯಾಗಿದೆ.
ಮೊದಲ ದಿನ ಏಳು ಕೋತಿಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಅನುಮಾನಗೊಂಡ ಅಧಿಕಾರಿಗಳು ಅರಣ್ಯದಲ್ಲಿ ತೀವ್ರ ಶೋಧ ಕಾರ್ಯ ನಡೆಸಿದಾಗ ಎರಡನೇ ದಿನ ಮತ್ತೂ ನಾಲ್ಕು ಕೋತಿಗಳ ಮೃತದೇಹ ಪತ್ತೆಯಾಗಿದೆ. ಒಂದರ ನಂತರ ಒಂದರಂತೆ ಮಂಗಗಳು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಾಥಮಿಕ ಪರಿಶೀಲನೆಯಲ್ಲಿ ಕೋತಿಗಳು ಯಾವುದೇ ರೋಗದಿಂದ ಮೃತಪಟ್ಟಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮೇಲ್ನೋಟಕ್ಕೆ ವಿಷ ಹಾಕಿ ಕೋತಿಗಳನ್ನು ಕೊಂದಿರುವ ಸಾಧ್ಯತೆ ಇದೆ ಎಂಬ ಶಂಕೆ ಬಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಿನ ಹಿಂದಿನ ನಿಖರ ಕಾರಣ ಪತ್ತೆಹಚ್ಚಲು ಅರಣ್ಯಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಸದ್ಯ ಊರ್ಡಿಗೆರೆ ಪಶು ಆಸ್ಪತ್ರೆಯಲ್ಲಿ ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಇಂತಹ ಸರಣಿ ಸಾವು ಸಂಭವಿಸಿರುವುದು ಅರಣ್ಯ ಸಂರಕ್ಷಣೆಯ ಮೇಲೆಯೇ ದೊಡ್ಡ ಪ್ರಶ್ನೆ ಎತ್ತಿದೆ.



