ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ಪಿ.ಎಸ್.ಐ ಈರಣ್ಣ ರಿತ್ತಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅವರನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಗಮಿಸುವ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈರಣ್ಣ ರಿತ್ತಿ ವರ್ಗಾವಣೆಗೆ ಆಗ್ರಹಿಸಿ ನಿರಂತರವಾಗಿ ಪ್ರತಿಭಟನೆ ನಡೆಸಿದರೂ ಪ್ರಯೋಜನ ಆಗಿಲ್ಲ. ಈರಣ್ಣ ರಿತ್ತಿ ಭ್ರಷ್ಟ ಅಧಿಕಾರಿಯಾಗಿದ್ದು, ಲಂಚದ ರೂಪದಲ್ಲಿ ಪಡೆದ ಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ನೀಡುತ್ತಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ. ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಬೆಳಿಗ್ಗೆ ನೇಮಕವಾದ ಎಸ್ಪಿ ಅವರನ್ನು ರಾತ್ರೋರಾತ್ರಿ ವರ್ಗಾವಣೆಗೊಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ದ್ವಿಮುಖ ನೀತಿಯ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪ್ರಥಮವಾಗಿ ಬಳ್ಳಾರಿಯಲ್ಲಿ ವೈಯಕ್ತಿಕ ಗನ್‌ಮ್ಯಾನ್‌ನಿಂದ ಯುವಕನ ಕೊಲೆ ನಡೆದಿದೆ. ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ಉದ್ದೇಶವೇನಿತ್ತು? ರೆಡ್ಡಿ ಕುಟುಂಬವನ್ನು ಮುಗಿಸುವ ಹುನ್ನಾರ ರಾಜ್ಯ ಸರ್ಕಾರದಿಂದ ನಡೆದಿರಬಹುದು ಎಂಬ ಅನುಮಾನವಿದೆ. ಘಟನೆಗೆ ಸಂಬಂಧಿಸಿದಂತೆ ಎಂಟು ಪ್ರಕರಣ ದಾಖಲಾದರೂ ಯಾರನ್ನೂ ಬಂಧಿಸಿಲ್ಲ. ಶಾಸಕರಿಗೊಂದು, ಜನಸಾಮಾನ್ಯರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದ ಅವರು, ಈ ಮೂಲಕ ಡಾ. ಅಂಬೇಡ್ಕರ್ ಬರೆದ ಕಾನೂನಿಗೆ ಅವಮಾನ ಮಾಡಲಾಗುತ್ತಿದೆ ಎಂದರು.
ಜಗತ್ತಿಗೆ ರಾಮನನ್ನು ಸರಳವಾಗಿ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಬಳ್ಳಾರಿಯಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಬೆಂಬಲಿಗರು ಬಳ್ಳಾರಿಯಲ್ಲಿ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ತಮ್ಮ ಶಾಸಕರನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೊಲೆಯಾದ ಯುವಕನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಕುಮಾರ ನಡಗೇರಿ, ಶಿವಯೋಗಿ ಹಿರೇಮಠ, ಈರಣ್ಣ ಪೂಜಾರ, ಪಿ.ಎಸ್. ಕಾಳೆ, ಸೋಮು ಗುಡಿ, ಹುಲಗಪ್ಪ ವಾಲ್ಮೀಕಿ, ಸುನೀಲ ಮುಳ್ಳಾಳ, ಸತೀಶ್ ಕುಂಬಾರ, ಹರೀಶ್ ಗೋಸಾವಿ, ವೆಂಕಟೇಶ್ ದೊಡ್ಡಮನಿ, ಕಿರಣ್ ಹಿರೇಮಠ ಉಪಸ್ಥಿತರಿದ್ದರು.
“ಜ. 7ರಂದು ರಾಜ್ಯ ಸರ್ಕಾರದ ದ್ವಿಮುಖ ನೀತಿ ಖಂಡಿಸಿ ಮುಳಗುಂದ ನಾಕಾದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಎಲ್ಲ ಹಿಂದೂಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಬೇಕು”
ರಾಜು ಖಾನಪ್ಪನವರ.
ರಾಜ್ಯ ಸಂಚಾಲಕ,
ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟ.



