ಬೆಂಗಳೂರು: ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಪಶ್ಚಿಮ ಬಂಗಾಳ ಮೂಲದ ಷಹನಾಜ್ ಖಾತುಂ (6) ಕೊಲೆಯಾದ ಬಾಲಕಿಯಾಗಿದ್ದು, ಪ್ಲಾಸ್ಟಿಕ್ ರೋಪ್ ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಲ್ಲೂರುಹಳ್ಳಿ ಸಮೀಪದ ದೇವಸ್ಥಾನದ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮೃತ ಬಾಲಕಿಯ ಪೋಷಕರು ನಲ್ಲೂರುಹಳ್ಳಿ ಬಳಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ಬಾಲಕಿಯ ಕುಟುಂಬದ ಸಮೀಪದಲ್ಲೇ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಮತ್ತೊಂದು ಕುಟುಂಬದ ವ್ಯಕ್ತಿಯೊಬ್ಬರ ವಿರುದ್ಧ ಶಂಕೆ ವ್ಯಕ್ತವಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇತ್ತೀಚೆಗೆ ಬಾಲಕಿಯ ತಾಯಿ ಹಾಗೂ ಆ ಮತ್ತೊಂದು ಕುಟುಂಬದ ನಡುವೆ ಜಗಳ ನಡೆದಿತ್ತು. ಈ ನಡುವೆ ಜನವರಿ 5ರಂದು ಬೆಳಿಗ್ಗೆ ಮನೆ ಸಮೀಪ ಆಟವಾಡುತ್ತಿದ್ದ ಬಾಲಕಿ ಅಕಸ್ಮಾತ್ತಾಗಿ ನಾಪತ್ತೆಯಾಗಿದ್ದಳು. ಅಕ್ಕಪಕ್ಕದ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ, ಪೋಷಕರು ಜನವರಿ 6ರಂದು ಮಧ್ಯಾಹ್ನ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ತಕ್ಷಣ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದು, ಅದೇ ದಿನ ತಡರಾತ್ರಿ ನಲ್ಲೂರುಹಳ್ಳಿಯ ದೇವಸ್ಥಾನದ ರಸ್ತೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಪ್ಲಾಸ್ಟಿಕ್ ರೋಪ್ ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ದೃಢಪಟ್ಟಿದ್ದು, ಮೃತದೇಹದಲ್ಲಿ ಬೇರೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.



