ವಿಜಯಸಾಕ್ಷಿ ಸುದ್ದಿ, ಗದಗ: ರೈತರಿಗೆ ಬೆಳೆ ಪರಿಹಾರ ಸಮರ್ಪಕವಾಗಿ ವಿತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕಿಸಾನ್ ಮೋರ್ಚಾ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜ. 8ರಿಂದ ರೋಣ ಪಟ್ಟಣದ ತಹಸೀಲ್ದಾರ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷ ಮಹಾದೇವಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿಭಟನಾ ಧರಣಿ ಆರಂಭಕ್ಕೂ ಮುನ್ನ ರೋಣ ಕೃಷಿ ಮಾರುಕಟ್ಟೆಯಿಂದ ರೈತರ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 11.30ಕ್ಕೆ ರೋಣ ತಾಲೂಕು ತಹಸೀಲ್ದಾರರ ಕಚೇರಿಗೆ ತೆರಳಲಾಗುತ್ತದೆ ಎಂದರು. ತಹಸೀಲ್ದಾರರ ಕಚೇರಿ ಎದುರು ನಡೆಯುವ ಹೋರಾಟದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ರೈತರು ಮತ್ತು ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಬೆಳೆ ಬೆಲೆ ನಿರ್ಧಾರ ಮಾಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಬೆಳೆ ನಾಶವಾದ ಸಂದರ್ಭದಲ್ಲಿಯೂ ಖಾಸಗಿ ವಿಮಾ ಕಂಪನಿಗಳ ಭ್ರಷ್ಟಾಚಾರದ ಪರಿಣಾಮವಾಗಿ ಬೆಳೆ ವಿಮೆ ಮಾಡಿಸಿಕೊಂಡ ರೈತರಿಗೆ ಪರಿಹಾರ ದೊರೆಯುತ್ತಿಲ್ಲ. ಆದ್ದರಿಂದ ರೈತರ ಬೆಳೆ ಪರಿಹಾರವನ್ನು ಸಮರ್ಪಕವಾಗಿ ವಿತರಿಸಬೇಕು. ಕಡಲೆ ಬೆಳೆಗೆ ಸಂಬಂಧಿಸಿದಂತೆ ಬೆಳೆ ಬರುವ ಪೂರ್ವದಲ್ಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಎಲ್ಲ ಬೆಳೆಗಳಿಗೆ ವಿಮಾ ಪರಿಹಾರ ಮೊತ್ತವನ್ನು ಶೀಘ್ರವಾಗಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ರೋಣ ತಾಲೂಕು ರೈತ ಸಂಘದ ತಾಲೂಕು ಅಧ್ಯಕ್ಷ ಸಂಗಣ್ಣ ದಂಡಿನ, ರೈತ ಮುಖಂಡರಾದ ಮೇಘರಾಜ ಬಾವಿ, ಎಸ್.ಎಸ್. ಕಂಠಿ, ಸಂಗಮೇಶ ಪವಾಡಶೆಟ್ಟರ, ರಾಮಣ್ಣ ಸೂಡಿ, ದೇವಪ್ಪ ಹುನಗುಂದ, ಬಸನಗೌಡ ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ರೈತರು ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.



