ಬೆಂಗಳೂರು: ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಸಿಬಿಐ ಮಾಜಿ ಸಚಿವ ಬಿ. ನಾಗೇಂದ್ರಗೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಈ ಮೂಲಕ ನಾಗೇಂದ್ರಗೆ ಮತ್ತೆ ಬಂಧನದ ಭೀತಿ ಉಂಟುಮಾಡಿದೆ. ವಾಲ್ಮೀಕಿ ಹಗರಣ ಹೊರಬಂದ ನಂತರ, ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಇಡಿಯಿಂದ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ್ದರು.
ಇತ್ತೀಚೆಗೆ ಜಾಮೀನು ಪಡೆದು ಹೊರಬಂದ ನಾಗೇಂದ್ರ, ಸಂಪುಟ ಪುನಾರಚನೆ ವೇಳೆ ತನ್ನ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಇದ್ದರು. ಇದೀಗ ಸಿಬಿಐ ನೋಟಿಸ್ ಜಾರಿ ಮಾಡಿದ್ದು, ನಾಗೇಂದ್ರ ಅವರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ, ಅವರು ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.



