ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಅಚ್ಚರಿ ಮೂಡಿಸುವ ಘಟನೆ ನಡೆದಿದೆ.
ಹಳೆಯ ಮನೆಯ ಅಡಿಪಾಯ ತೋಡುವ ವೇಳೆ ಅಪಾರ ಪ್ರಮಾಣದ ಪುರಾತನ ಚಿನ್ನಾಭರಣಗಳಿರುವ ಲೋಹದ ಚೆಂಬು ಪತ್ತೆಯಾಗಿದ್ದು, ಗ್ರಾಮದಲ್ಲಿ ಸಂಚಲನ ಉಂಟಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ್ ರಿತ್ತಿ ಅವರ ಮನೆಯಲ್ಲಿ ಹೊಸ ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೋಡುತ್ತಿದ್ದಾಗ ಕಾರ್ಮಿಕರಿಗೆ ಲೋಹದ ಚೆಂಬು ಸಿಕ್ಕಿದೆ. ಪರಿಶೀಲನೆ ನಡೆಸಿದಾಗ ಅದರೊಳಗೆ ಚಿನ್ನದ ಚೈನ್, ಬೆಲೆಬಾಳುವ ಬಳೆಗಳು ಹಾಗೂ ವಿವಿಧ ವಿನ್ಯಾಸದ ಉಂಗುರಗಳು ಪತ್ತೆಯಾಗಿವೆ.
ನಿಧಿ ಸಿಕ್ಕ ಮನೆಗೆ ಹೊಂದಿಕೊಂಡಂತೆ ಪುರಾತನ ಲಕ್ಷ್ಮೀ ದೇವಸ್ಥಾನ ಇರುವುದರಿಂದ, ಈ ಚಿನ್ನಾಭರಣಗಳು ದೇವಸ್ಥಾನಕ್ಕೆ ಸೇರಿದ ಪುರಾತನ ಒಡವೆಗಳಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸ ಹೊಂದಿರುವ ಲಕ್ಕುಂಡಿಯಲ್ಲಿ ಮತ್ತೆ ನಿಧಿ ಪತ್ತೆಯಾಗಿರುವುದು ಇತಿಹಾಸಕ್ತರಲ್ಲಿ ಕುತೂಹಲ ಹೆಚ್ಚಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಭರಣಗಳ ಕಾಲಮಾನ ಮತ್ತು ಮೌಲ್ಯ ನಿಗದಿಗಾಗಿ ಸಂಶೋಧನೆ ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಡಳಿತ ಸ್ಥಳವನ್ನು ಹೆಚ್ಚಿನ ಉತ್ಖನನ ನಡೆಸುವ ಸಾಧ್ಯತೆ ಇದೆ. 11–12ನೇ ಶತಮಾನದ ದೇವಸ್ಥಾನಗಳಿಗೆ ಹೆಸರುವಾಸಿಯಾದ ಲಕ್ಕುಂಡಿ ಗ್ರಾಮವು 101 ದೇವಸ್ಥಾನಗಳು ಮತ್ತು 101 ಬಾವಿಗಳನ್ನು ಹೊಂದಿರುವ ‘ಶಿಲ್ಪಕಲೆಯ ತೊಟ್ಟಿಲು’ ಎಂದೇ ಖ್ಯಾತಿ ಪಡೆದಿದೆ. ಇಂದಿನ ನಿಧಿ ಪತ್ತೆ ಕಲ್ಯಾಣ ಚಾಲುಕ್ಯರ ಕಾಲದ ಆರ್ಥಿಕ ಸಮೃದ್ಧಿ ಮತ್ತೊಮ್ಮೆ ನೆನಪಿಸಿದೆ.
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ್, ಎಡಿಸಿ ದುರ್ಗೆಶ್ ಸೇರಿದಂತೆ ಹಲವು ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ಗಂಗವ್ವ ಬಸವರಾಜ್ ರಿತ್ತಿ ಕುಟುಂಬಸ್ಥರು, ತಮ್ಮ ಮನೆ ತಳಪಾಯ ತೆಗೆಯುವ ವೇಳೆ ಪತ್ತೆಯಾದ ನಿಧಿಯನ್ನ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದು, ಇವರ ಪ್ರಾಮಾಣಿಕತೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟು 466 ಗ್ರಾಂ ಹಳೆ ಕಾಲದ ಚಿನ್ನದ ಆಭರಣಗಳು ಸಿಕ್ಕಿವೆ.. ಸದ್ಯ ಇದರ ಮೌಲ್ಯ ಸುಮಾರು 65 ರಿಂದ 70 ಲಕ್ಷ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ. `



