‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಕುತೂಹಲ ತೀವ್ರವಾಗಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಧ್ರುವಂತ್ ಮತ್ತು ಮ್ಯೂಟೆಂಟ್ ರಘು ಅವರು ಫಿನಾಲೆ ವಾರದವರೆಗೆ ಸ್ಪರ್ಧೆಯಲ್ಲಿ ಉಳಿದಿದ್ದಾರೆ.
ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿರುವ ಫೋಟೋ ವೈರಲ್ ಆಗಿದ್ದು, ಬಿಗ್ ಬಾಸ್ ಸಂಬಂಧಿತ ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವರು ಈ ಭೇಟಿಯನ್ನು ಅಶ್ವಿನಿ ಗೌಡ ಪರವಾಗಿ ಲಾಬಿ ನಡೆಸಲು ನಡೆದ ಭೇಟಿ ಎಂದು ಪ್ರಚಾರ ಮಾಡಿದ್ದಾರೆ.
ಈ ಕುರಿತು ಕರವೇ ಮುಖಂಡ ಧರ್ಮಣ್ಣ ಅವರು ಸ್ಪಷ್ಟನೆ ನೀಡಿದ್ದು, ಈ ಭೇಟಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. “ನಾರಾಯಣ ಗೌಡ ಅವರು ತಮ್ಮ ಮಗನ ಮದುವೆಗೆ ಆಹ್ವಾನ ನೀಡಲು ಸುದೀಪ್ ಮನೆಗೆ ಹೋಗಿದ್ದರು. ಈ ಹಿಂದೆಯೇ ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮದುವೆ ಪತ್ರಿಕೆ ನೀಡಲಾಗಿದೆ. ಸುದೀಪ್ ಅವರಿಗೂ ಆಹ್ವಾನ ನೀಡಲು ಭೇಟಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಇನ್ನು, “ಈ ಫೋಟೋವನ್ನು ಆಧರಿಸಿ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದರಲ್ಲಿ ನಾರಾಯಣ ಗೌಡ ಮತ್ತು ಸುದೀಪ್ ಅವರ ವಿರೋಧಿಗಳ ಪಾತ್ರ ಇದೆ. ಇದು ಖಂಡನೀಯ” ಎಂದು ಧರ್ಮಣ್ಣ ಹೇಳಿದ್ದಾರೆ.
ಬಿಗ್ ಬಾಸ್ ಮನೆಯ ಆಟದ ವಿಚಾರಕ್ಕೆ ಬಂದ್ರೆ, ಈ ಬಾರಿ ಗಿಲ್ಲಿ ನಟ ಅವರ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹಲವರು ಗಿಲ್ಲಿಯೇ ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನವರಿ 17 ಮತ್ತು 18ರಂದು ನಡೆಯುವ ಗ್ರ್ಯಾಂಡ್ ಫಿನಾಲೆಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಸ್ಪರ್ಧಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಗಿಲ್ಲಿಗೆ ಹೆಚ್ಚಿನ ಬೆಂಬಲ ಕಂಡುಬರುತ್ತಿದೆ.



