ವಿಜಯಸಾಕ್ಷಿ ಸುದ್ದಿ, ಗದಗ;
ಇಲ್ಲಿನ ಹಳೆ ಬಸ್ ನಿಲ್ದಾಣ (ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ) ಬಳಿ ಇರುವ ಬ್ಯಾಂಗಲ್ಸ್ ಅಂಗಡಿಯೊಂದರ ಮೇಲ್ಛಾವಣಿ ಶೀಟ್ ಕಟ್ ಮಾಡಿ ಖದೀಮರು ಕಳ್ಳತನ ಮಾಡಿದ್ದಾರೆ.
ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಜು ಕಟಾರಿ ಎಂಬುವವರಿಗೆ ಸೇರಿದ ವಿಷ್ಣು ಬ್ಯಾಂಗಲ್ಸ್ ಸ್ಟೋರ್ಸ್’ನಲ್ಲಿದ್ದ ಸುಮಾರು 50 ಸಾವಿರ ರೂ. ಕದ್ದಿದ್ದಾರೆ.
ಅಂಗಡಿ ಮಾಲೀಕರು ನಿನ್ನೆ ರಾತ್ರಿ ಸಿ.ಸಿ ಟಿವಿ ಬಂದ್ ಮಾಡಿ ಮನೆಗೆ ಹೋಗಿದ್ದರು. ಇದು ಕಳ್ಳತನಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದ್ದು, ಖದೀಮರು ಅಂಗಡಿಯಲ್ಲಿದ್ದ ಹಣವನ್ನು ಸಲೀಸಾಗಿ ಕದ್ದೋಯ್ದಿದ್ದಾರೆ.

ದುರಂತವೆಂದರೆ ಕಳ್ಳತನವಾಗಿರುವ ವಿಷ್ಣು ಬ್ಯಾಂಗಲ್ಸ್ ಅಂಗಡಿಯ ಸಮೀಪದಲ್ಲೇ ಶಹರ ಪೊಲೀಸ್ ಠಾಣೆ ಇದ್ದರೂ, ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.



