ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಸ್ಥಳಕ್ಕೆ ಇದೀಗ ವಿದೇಶಿಗರ ಗಮನ ಸೆಳೆಯುತ್ತಿದೆ. ನಿಧಿ ಪತ್ತೆಯಾದ ಜಾಗವನ್ನು ವೀಕ್ಷಿಸಲು ಫ್ರಾನ್ಸ್ ಮೂಲದ ಹದಿನೈದು ಪ್ರವಾಸಿಗರ ತಂಡ ಲಕ್ಕುಂಡಿಗೆ ಭೇಟಿ ನೀಡಿದೆ.
ನಿಧಿ ಸಿಕ್ಕ ಸ್ಥಳವನ್ನು ಸಮೀಪದಿಂದ ವೀಕ್ಷಿಸಿದ ವಿದೇಶಿ ಪ್ರವಾಸಿಗರು, ಈ ಘಟನೆಯಿಂದ ಬಹಳಷ್ಟು ಖುಷಿಪಟ್ಟಿದ್ದು, ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆಯನ್ನು “ಮಿರಾಕಲ್” ಎಂದು ಶ್ಲಾಘಿಸಿದ್ದಾರೆ. ವಿದೇಶಿಗರ ಪ್ರಕಾರ, ಇಂತಹ ಪ್ರಾಮಾಣಿಕತೆ ಜಗತ್ತಿನಲ್ಲಿಯೇ ಅಪರೂಪವಾಗಿದ್ದು, ಇದು ಎಲ್ಲರಿಗೂ ಮಾದರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಕಸ್ತೂರಿ ರಿತ್ತಿ ಕುಟುಂಬದ ಪ್ರಾಮಾಣಿಕತೆಗೆ ವಿದೇಶಿಗರು ವಿಶೇಷ ಗೌರವ ಸೂಚಿಸಿದ್ದಾರೆ. ಕೆಲ ವಿದೇಶಿಗರು ಕಸ್ತೂರಿ ರಿತ್ತಿಗೆ ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಗಮನಾರ್ಹವೆಂದರೆ, ಲಕ್ಕುಂಡಿ ಗ್ರಾಮದ ನಿವಾಸಿ ಪ್ರಜ್ವಲ್ ರಿತ್ತಿ ಅವರು ಸಿಕ್ಕಿದ್ದ ನಾಲ್ಕು ನೂರು ಅರವತ್ತೊಂದು ಗ್ರಾಂ ಚಿನ್ನವನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಈ ಪ್ರಾಮಾಣಿಕತೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.



